ಕುಟುಂಬ ಅಭಿವೃದ್ಧಿ ಜತೆ ದೇಶದ ಪ್ರಗತಿಗೂ ಯುವಕರು ಚಿಂತನೆ ಮಾಡಲಿ: ಡಾ. ಸುರೇಶ ಜಂಗಮಶೆಟ್ಟಿ

KannadaprabhaNewsNetwork |  
Published : Apr 05, 2025, 12:49 AM IST
ಮ | Kannada Prabha

ಸಾರಾಂಶ

ರಾಷ್ಟ್ರದ ಯುವಕರು ಜವಾಬ್ದಾರಿಗಳಿಂದ ನುಣುಚಿಕೊಳ್ಳಬಾರದು. ರಾಷ್ಟ್ರವನ್ನು ಕಟ್ಟುವಲ್ಲಿ ಸ್ವಾತಂತ್ರ್ಯ ಹೋರಾಟ ಇತ್ತೀಚಿನ ಯುವಕರಿಗೊಂದು ಬಹು ದೊಡ್ಡ ಸ್ಫೂರ್ತಿಯಾಗಿದೆ.

ಬ್ಯಾಡಗಿ: ಕುಟುಂಬದ ಅಭಿವೃದ್ಧಿ ಜತೆಗೆ ದೇಶದ ಜವಾಬ್ದಾರಿಗಳ ಬಗ್ಗೆಯೂ ಯುವಕರು ಮಾತನಾಡಬೇಕು. ಯುವಶಕ್ತಿಯಲ್ಲಿನ ಬದಲಾವಣೆ ದೇಶದ ಅಭಿವೃದ್ಧಿಯ ದಿಕ್ಸೂಚಿಯಾಗಲಿದೆ. ಯುವಕರಿಗಿದು ಪರೀಕ್ಷಾ ಸಮಯ. ಬರುವ 25 ವರ್ಷಗಳಲ್ಲಿ ದೇಶವನ್ನು ವಿಶ್ವಮಟ್ಟದ ಹಂತಕ್ಕೆ ಕೊಂಡೊಯ್ಯಬೇಕಾಗಿದ್ದು, ಇದಕ್ಕಾಗಿ ತಾವು ದಿನದಲ್ಲಿ 18 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದೆ ಎಂದು ಹಾವೇರಿ ವಿವಿ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸವಾಲು ಮತ್ತು ಅವಕಾಶ ಅರ್ಥ ಮಾಡಿಕೊಳ್ಳುವುದು ಈ ಕುರಿತು ಒಂದು ದಿನದ ರಾಷ್ಟ್ರೀಯ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ಯುವಕರು ಜವಾಬ್ದಾರಿಗಳಿಂದ ನುಣುಚಿಕೊಳ್ಳಬಾರದು. ರಾಷ್ಟ್ರವನ್ನು ಕಟ್ಟುವಲ್ಲಿ ಸ್ವಾತಂತ್ರ್ಯ ಹೋರಾಟ ಇತ್ತೀಚಿನ ಯುವಕರಿಗೊಂದು ಬಹು ದೊಡ್ಡ ಸ್ಫೂರ್ತಿಯಾಗಿದೆ. ಸತ್ಯಾಗ್ರಹ, ಕ್ರಾಂತಿಕಾರಿ ಮಾರ್ಗ, ಅಸಹಕಾರ ಚಳವಳಿ, ಸ್ವದೇಶಿ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಗಳಂತಹ ಪ್ರತಿಯೊಂದು ಪ್ರಯತ್ನ ಸ್ವಾತಂತ್ರ್ಯಕ್ಕಾಗಿ ಅಂದು ನಡೆದ ಅದ್ಭುತ ಹೋರಾಟ ಪ್ರೇರಣೆಯ ಮೂಲವಾಗಿವೆ. ಇದಾದ ಬಳಿಕ ವಿಕಸಿತ ಭಾರತ ಎಂಬ ಕಲ್ಪನೆ ದೇಶದ ಇತಿಹಾಸದಲ್ಲಿ ಎರಡನೇ ಬಾರಿಗೆ ಯುವಕರನ್ನು ಚಿಂತನೆಗೊಳಿಪಡುಸುತ್ತಿದೆ. ಅಭಿವೃದ್ಧಿಶೀಲ ಭಾರತಕ್ಕೆ ಇದೊಂದು ಸೂಕ್ತ ಕಾರ್ಯಕ್ರಮವಾಗಿದೆ ಎಂದರು.

ಗುರಿ ನಿರ್ಣಯ ಒಂದೇ ಆಗಿರಬೇಕು: ಅಭಿವೃದ್ಧಿಯ ಮಾರ್ಗಸೂಚಿಯನ್ನು ಕೇವಲ ಸರ್ಕಾರ ನಿರ್ಧರಿಸಬೇಕೆಂದಿಲ್ಲ. ಬದಲಾಗಿ ರಾಷ್ಟ್ರದ ಯುವಕರು ಕೂಡ ನಿರ್ಧರಿಸಬಹುದು. ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ದೇಶವನ್ನು ಮುನ್ನಡೆಸುವಂತಹ ಹೊಣೆಗಾರಿಕೆ ನೀಡುವುದೇ ವಿಕಸಿತ ಭಾರತದ ಮೂಲ ಉದ್ದೇಶವಾಗಿದೆ. ನಿಮ್ಮಗುರಿ ನಿರ್ಣಯ ಒಂದೇ ಆಗಿರಬೇಕು. ಯುವಕರು ತೆಗೆದುಕೊಳ್ಳುವ ಯಾವುದೇ ಜವಾಬ್ದಾರಿಗಳು ದೇಶವನ್ನು ಅಭಿವೃದ್ಧಿಯಲ್ಲಿ ಮುಂದುವರಿಯುವಂತೆ ಮಾಡಲಿದೆ ಎಂದರು.

ಯುವಕರನ್ನು ಸಂಪರ್ಕಿಸುವ ಕಾರ್ಯಕ್ರಮ: ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಡ್ಡಿಪುಡಿ ಮಾತನಾಡಿ, ಜನರ ಅಭಿವೃದ್ಧಿಯಿಂದ ಮಾತ್ರ ರಾಷ್ಟ್ರವು ಅಭಿವೃದ್ಧಿ ಹೊಂದಲು ಸಾಧ್ಯ. ಪ್ರಸ್ತುತ ಸಮಯದಲ್ಲಿ ವ್ಯಕ್ತಿಯ ಅಭಿವೃದ್ಧಿ ಅತ್ಯಂತ ಮಹತ್ವ ಪಡೆದಿದೆ. ದೇಶದ ಪ್ರತಿಯೊಂದು ಸಂಸ್ಥೆ ಮತ್ತು ವ್ಯಕ್ತಿಗಳು ನಡೆಸುವ ಪ್ರತಿಯೊಂದು ಪ್ರಯತ್ನವೂ ವಿಕಸಿತ ಭಾರತಕ್ಕಾಗಿಯೇ ಎಂಬ ಮಹಾಸಂಕಲ್ಪದೊಂದಿಗೆ ಸಾಗಬೇಕಾಗಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವತ್ತ ಎಲ್ಲ ಹರಿವುಗಳನ್ನು ಜೋಡಿಸಬೇಕಾಗಿದೆ ಎಂದರು.

ವೇದಿಕೆಯಲ್ಲಿ ಪ್ರೊ. ಶಶಿಧರ ರುದ್ರಪ್ಪ, ಪ್ರೊ. ದೀಪಕ ಉಮರಾವ್ ಸರ್ವೇ, ಡಾ. ಪ್ರವೀಣ ಶಾಮರಾವ ಜಾಧವ, ಡಾ. ಬಿ.ಎನ್. ದೇವೆಂದ್ರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ