ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಿಂದ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ನಿರ್ಮಿಸಲುದ್ದೇಶಿರುವ ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮಂಜೂರು ಮಾಡಿದ 3 ಎಕರೆ ಜಮೀನನ್ನು ತಕ್ಷಣವೇ ಜಿಲ್ಲಾಡಳಿತ ವಾಪಾಸ್ಸು ಪಡೆಯಲು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಡಳಿತ ಭವನದ ಎದುರು ಸಂಘದ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ನೇತೃತ್ವದಲ್ಲಿ ಪ್ರತಿಭಟಿಸಿದ ತಾಲೂಕಿನ ಹೊಸಳ್ಳಿ ಗ್ರಾಮಸ್ಥರು, ದಾವಣಗೆರೆ ಪಾಲಿಕೆ ತ್ಯಾಜ್ಯ ಘಟಕ ವಿಲೇವಾರಿ ಘಟಕವನ್ನು ಯಾವುದೇ ಕಾರಣಕ್ಕೂ ತಮ್ಮ ಊರು, ಊರಿನ ಬಳಿ ಸ್ಥಾಪಿಸದಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರಿಗೆ ಮನವಿ ಅರ್ಪಿಸಿದರು.ಈ ವೇಳೆ ಮಾತನಾಡಿದ ಹುಚ್ಚವ್ವನಹಳ್ಳಿ ಮಂಜುನಾಥ್, ಹೊಸಳ್ಳಿ ಗ್ರಾಮದ ಗೋಮಾಳದಲ್ಲಿ ದಾವಣಗೆರೆ ಪಾಲಿಕೆಯಿಂದ ನಿರ್ಮಿಸಲುದ್ದೇಶಿರುವ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಿಲ್ಲಾಡಳಿತ ಮಂಜೂರು ಮಾಡಿದ 3 ಎಕರೆ ಜಮೀನನ್ನು ತಕ್ಷಣ ಹಿಂಪಡೆಯಬೇಕು. ಜಿಲ್ಲಾಡಳಿತ, ದಾವಣಗೆರೆ ಪಾಲಿಕೆ, ಜಿಪಂನಿಂದ ಹೊಸಳ್ಳಿ ಬಳಿ ಘಟಕ ನಿರ್ಮಾಣಕ್ಕೆ ಉದ್ದೇಶಿಸಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕೇಂದ್ರದಿಂದ 23 ಕಿಮೀ ದೂರದಲ್ಲಿರುವ ಹೊಸಳ್ಳಿ ಗ್ರಾಮದ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಹೊಸಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ತೀವ್ರ ವಿರೋಧವೂ ಇದೆ. ವಾಸ್ತವದಲ್ಲಿ ಪಾಲಿಕೆ ವ್ಯಾಪ್ತಿ ಕೇವಲ 10 ಕಿ.ಮೀ ಗೆ ಸೀಮಿತವಾಗಿದೆ. ಆದರೆ, ಈಗ 23 ಕಿ.ಮೀ ದೂರದ ಹೊಸಳ್ಳಿ ಬಳಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಮುಂದಾಗುತ್ತಿರುವುದು ಕಾನೂನು ಉಲ್ಲಂಘನೆಯಾಗಿದೆ ಎಂದರು.ಸದರಿ ರಿ.ಸ.ನಂ.ನಲ್ಲಿ ಹಲವಾರು ರೈತರು ಅನೇಕ ದಶಕಗಳಿಂದ ಸಾಗುವಳಿ ಮಾಡಿಕೊಂಡು, ಬದುಕು ಕಟ್ಟಿಕೊಂಡಿದ್ದಾರೆ. ಭೂ ಹಕ್ಕಿಗಾಗಿ ಈಗಾಗಲೇ ಫಾರಂ ನಂ.57ರಲ್ಲಿ ಅರ್ಜಿ ಸಹಿತ ಸಲ್ಲಿಸಿದ್ದಾರೆ. ಪಾಲಿಕೆ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಭೂ ರಹಿತ ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದು, ಮುನ್ಸಿಪಲ್ ಕಾಯ್ದೆ 1976ರ ಪ್ರಕಾರ ಅಂತಹ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಅವಕಾಶವಿದೆ. ಅಂತಹ ಸರ್ಕಾರಿ ಜಮೀನುಗಳಲ್ಲಿ ಘನತ್ಯಾಜ್ಯ ಸಂಸ್ಕರಣಾ ಘಟಕ ಮಾಡಿಕೊಳ್ಳಬೇಕೆ ಹೊರತು, ಪಾಲಿಕೆ ವ್ಯಾಪ್ತಿಯನ್ನೂ ಮೀರಿ, 23 ಕಿಮೀ ದೂರದ ಹಳ್ಳಿಯಲ್ಲಿ ಅಲ್ಲ ಎಂದು ಆಕ್ಷೇಪಿಸಿದರು.
ಕಾನೂನು ಪ್ರಕಾರವೂ ಅದು ಸರಿಯಲ್ಲ. ರಾಜ್ಯ ಸರ್ಕಾರ ಈಗಾಗಲೇ ದಾವಣಗೆರೆ ಜಿಲ್ಲೆಯಲ್ಲಿ ಕ್ರಷರ್ ಬಫರ್ ಝೋನ್ ಮಾಡಿದೆ. ಅಲ್ಲಿ ಜಲ್ಲಿಕಲ್ಲು, ಎಂ ಸ್ಯಾಂಡ್ ಸೇರಿದಂತೆ ಇತರೆ ಕಟ್ಟಡ ನಿರ್ಮಾಣ ವಸ್ತುಗಳನ್ನು ಉತ್ಪಾದಿಸಲಾಗುತ್ತದೆ. ಅಂತಹ ಬಫರ್ ಝೋನ್‌ನಲ್ಲಿ ಕಟ್ಟಡ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಅವಕಾಶ ನೀಡಿದರೆ, ಯಾರಿಗೂ ತೊಂದರೆಯಾಗುವುದಿಲ್ಲ. ಅಲ್ಲದೇ, ತಾಲೂಕಿನ ಹೆಬ್ಬಾಳ್ ಗ್ರಾಮದ ಬಳಿ ಇನ್ನೂ ಸಾಕಷ್ಟು ಸರ್ಕಾರಿ ಜಮೀನು ಸಹ ಇದೆ. ಈ ಎಲ್ಲಾ ಅಂಶಗಳನ್ನು ಕೂಲಂಕುಷವಾಗಿ ಪರಿಗಣಿಸಿ, ಹೊಸಳ್ಳಿ ಗ್ರಾಮದ ಬಳಿ ನಿರ್ಮಿಸಲು ಉದ್ದೇಶಿಸಿರುವ ಘನತ್ಯಾಜ್ಯ ಸಂಸ್ಕರಣಾ ಘಟಕದ ವಿಚಾರ ಇಲ್ಲಿಗೆ ಕೈಬಿಡಬೇಕು ಎಂದು ಆಗ್ರಹಿಸಿದರು.ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಪಾಲಿಕೆ ಆಯುಕ್ತೆ ರೇಣುಕಾ ಸ್ಥಳಕ್ಕೆ ಧಾವಿಸಿ ಮನವಿ ಸ್ವೀಕರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ದಾವಣಗೆರೆ ತಾಲೂಕಿನ ಹೊಸಳ್ಳಿ ಗ್ರಾಮದ ಸದರಿ ಜಮೀನು ಜನ ವಸತಿ ಪ್ರದೇಶವಾಗಿದ್ದರೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲಾಗುವುದು. ಕ್ರಷರ್ ಝೋನ್‌ನಲ್ಲಿ ಘಟಕ ನಿರ್ಮಿಸುವ ಬಗ್ಗೆ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ರೈತ ಸಂಘದ ಮುಖಂಡರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿರುವುದಾಗಿ ತಿಳಿಸಿದರು.
ರೈತ ಸಂಘದ ಹೊಸಳ್ಳಿ ಮೋಹನ ನಾಯ್ಕ, ಚಿನ್ನಸಮುದ್ರ ಸುರೇಶ, ಭೀಮಣ್ಣ, ಮ್ಯಾಸರಹಳ್ಳಿ ಪ್ರಭು, ಗುಮ್ಮನೂರು ಲೋಕೇಶ, ಕುಕ್ಕವಾಡ ಶಿವಕುಮಾರ, ಪಾಳ್ಯ ರುದ್ರನಗೌಡ, ಕಡರ ನಾಯಕನಹಳ್ಳಿ ಪ್ರಭು, ಎಂ.ಬಿ.ಪಾಟೀಲ, ಆಲೂರು ಪರಶುರಾಮ, ಜಗದೀಶ ನಾಯ್ಕ, ರಾಮಚಂದ್ರಪ್ಪ, ಸುಜಾತ ಭೀಮಾನಾಯ್ಕ ಸೇರಿದಂತೆ ಗ್ರಾಮದ ನೂರಕ್ಕೂ ಅಧಿಕ ಜನರು ಪ್ರತಿಭಟನೆಯಲ್ಲಿದ್ದರು.