ಹಳಿಯಾಳ: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನೀಡಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಮಹಾರಾಷ್ಟ್ರದ ರಾಮಗಿರಿ ಮಹಾರಾಜರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಮುಸ್ಲಿಂ ಧರ್ಮಿಯರು ಆಗ್ರಹಿಸಿದರು.ಗುರುವಾರ ಪಟ್ಟಣದ ವಿವಿಧ ಮೊಹಲ್ಲಾಗಳ ಪ್ರಮುಖರು, ಮುಸ್ಲಿಂ ಜನಪ್ರತಿನಿಧಿಗಳ ನಿಯೋಗವು ತಾಲೂಕು ಆಡಳಿತ ಸೌಧಕ್ಕೆ ತೆರಳಿ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಶಿರಸ್ತೇದಾರ ಅನಂತ ಚಿಪ್ಪಲಗಟ್ಟಿ ಅವರಿಗೆ ಸಲ್ಲಿಸಿದರು. ಇತ್ತೀಚೆಗೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಸಿನ್ನರ್ ತಾಲೂಕಿನ ಶಹಾಪಂಚಲೆ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಮಗಿರಿ ಮಹಾರಾಜ್ ಅವರು, ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಬಗ್ಗೆ ನೀಡಿದ ಅವಮಾನಕಾರಿ ಹಾಗೂ ಪ್ರಚೋದನಾತ್ಮಕ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡಿದ್ದು, ಈ ಹೇಳಿಕೆಗಳು ಧಾರ್ಮಿಕ ಸಮುದಾಯಗಳ ಮಧ್ಯೆ ಶತ್ರುತ್ವ ಹುಟ್ಟಿಸುತ್ತಿವೆ. ಕೂಡಲೇ ರಾಮಗಿರಿ ಮಹಾರಾಜರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.