ಕೇಂದ್ರ,ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಧರಣಿ

KannadaprabhaNewsNetwork | Published : Feb 15, 2024 1:30 AM

ಸಾರಾಂಶ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಬಜೆಟ್ ಮಂಡನೆಯಾಗಿದ್ದು, ಅದರಲ್ಲಿ ಅಂಗನವಾಡಿ, ಬಿಸಿಯೂಟ ಸೇರಿ ಅನೇಕ ನೌಕರರಿಗೆ ಗೌರವಧನ ಹೆಚ್ಚಳ ಮಾಡುವುದರ ಬದಲಿಗೆ ಅನುದಾನ ಕಡಿತ ಮಾಡಿದೆ. ಇದರಿಂದ ಆ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುವ ಅನೇಕರು ಸಮಸ್ಯೆಗೆ ತುತ್ತಾಗುತ್ತಿದ್ದಾರೆ.

ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ನಾಳೆ ಪ್ರತಿಭಟನೆ । ಸಿಐಟಿಯು, ಕೆಪಿಆರ್ಎಸ್, ಡಿವೈಎಫ್ಐ ಸೇರಿ ವಿವಿಧ ಸಂಘಟನೆಗಳು ಭಾಗಿ

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಉದ್ಯೋಗ ಸೃಷ್ಟಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಜನವಿರೋಧಿ ನೀತಿಗಳ ಹಿಂಪಡೆಯುವುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಫೆ.16 ರಂದು ತಾಲೂಕು ಕೇಂದ್ರದಲ್ಲಿ ಸಿಐಟಿಯು, ಕೆಪಿಆರ್ಎಸ್, ಡಿವೈಎಫ್ಐ ಸೇರಿ ವಿವಿಧ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಈ ಕುರಿತು ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ಭಾಗ್ಯಮ್ಮ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸರ್ಕಾರ ಬಜೆಟ್ ಮಂಡನೆಯಾಗಿದ್ದು, ಅದರಲ್ಲಿ ಅಂಗನವಾಡಿ, ಬಿಸಿಯೂಟ ಸೇರಿ ಅನೇಕ ನೌಕರರಿಗೆ ಗೌರವಧನ ಹೆಚ್ಚಳ ಮಾಡುವುದರ ಬದಲಿಗೆ ಅನುದಾನ ಕಡಿತ ಮಾಡಿದೆ. ಇದರಿಂದ ಆ ಕೆಲಸವನ್ನೇ ನಂಬಿಕೊಂಡು ಜೀವನ ಸಾಗಿಸುವ ಅನೇಕರು ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವ ಬದಲಿಗೆ ಈ ರೀತಿಯಾಗಿ ಮಾಡುವುದು ಸರಿಯಲ್ಲ. ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಈಡೇರಿಸುವ ಸಲುವಾಗಿ ಫೆ.16 ರಂದು ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಕೆಪಿಆರ್ಎಸ್ ಕಾರ್ಯದರ್ಶಿ ಆದಿನಾರಾಯಣಸ್ವಾಮಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿಯಾಗಿವೆ. ರೈತ ವಿರೋಧಿ ನೀತಿಗಳ ಮೂಲಕ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿ, ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುತ್ತಿವೆ. ಕಷ್ಟಪಟ್ಟು ದೇಶಕ್ಕೆ ಅನ್ನ ನೀಡುವ ರೈತ ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾನೆ. ಆದರೆ ಕಾರ್ಪೋರೇಟ್ ಕಂಪನಿಗಳು ಮಾತ್ರ ಹೆಚ್ಚು ಲಾಭ ಮಾಡಿಕೊಳ್ಳುತ್ತಿವೆ. ಬೆಂಬಲ ಬೆಲೆ ಯೋಜನೆ ಜಾರಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಆರೋಪಿಸಿದರು.

ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿ, ಚುನಾವಣೆಯ ಸಮಯದಲ್ಲಿ ರಾಜ್ಯ ಸರ್ಕಾರ ಯುವನಿಧಿ ಹೆಸರಿನಲ್ಲಿ ಯುವಕರನ್ನು ಯಾಮಾರಿಸಿ ಮತ ಪಡೆದುಕೊಂಡಿದೆ. ಸರ್ಕಾರದ ಆಡಳಿತಕ್ಕೆ ಬಂದು ವರ್ಷ ಕಳೆದರೂ ಇನ್ನೂ ಯುವನಿಧಿ ಸಮರ್ಪಕವಾಗಿ ಜಾರಿಯಾಗಿಲ್ಲ. ಅತ್ತ ಕೇಂದ್ರ ಸರ್ಕಾರ ಲಕ್ಷಾಂತರ ಹುದ್ದೆಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಯುವಕರಿಗೆ ಮೋಸ ಮಾಡಿದೆ. ಆದ್ದರಿಂದ ಇಡೀ ದೇಶದಾದ್ಯಂತ ರೈತ, ಕಾರ್ಮಿಕ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದೆ ಎಂದರು.

ಸಿಐಟಿಯು ತಾಲೂಕು ಅಧ್ಯಕ್ಷೆ ಮಂಜುಳಾ, ಕರ್ನಾಟಕ ಕೃಷಿ ಕೂಲಿಕಾರರ ಸಂಘದ ರಮಣ, ಮುಖಂಡರಾದ ಶುಭಾ, ನರಸಮ್ಮ, ಗಂಗಾದೇವಿ, ರತ್ನಮ್ಮ ಸೇರಿದಂತೆ ಹಲವರು ಇದ್ದರು. -------------

ಪಟ್ಟಣದ ಸಿಪಿಎಂ ಕಚೇರಿಯಲ್ಲಿ ಫೆ.16 ರಂದು ಹಮ್ಮಿಕೊಂಡಿರುವ ಪ್ರತಿಭಟನೆಯ ಬಗ್ಗೆ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು.

Share this article