ಬಳ್ಳಾರಿ: ಕೇಂದ್ರ ಸರ್ಕಾರ ರೖತ-ಕಾರ್ಮಿಕರ ವಿರೋಧಿಯಾದ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆ 2025ಯನ್ನು ಸಂಸತ್ತಿನ ಅಧಿವೇಶನದಲ್ಲಿ ಮಂಡಿಸುತ್ತಿರುವುದನ್ನು ಖಂಡಿಸಿ ಎಐಪಿಎಫ್, ಎಐಕೆಕೆಎಂಎಸ್, ಎಐಯುಟಿಯುಸಿ ಹಾಗೂ ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘಗಳ ಮುಖಂಡರು ಜಂಟಿಯಾಗಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಐಪಿಎಫ್ ಜಿಲ್ಲಾ ಮುಖಂಡ ಡಾ. ಪ್ರಮೋದ್, ಅಖಿಲ ಭಾರತ ವಿದ್ಯುತ್ ಗ್ರಾಹಕರ ಸಂಘದ ಜಿಲ್ಲಾ ಮುಖಂಡ ಆರ್. ಸೋಮಶೇಖರ್ ಗೌಡ ಹಾಗೂ ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಗೋವಿಂದ್ ಮಾತನಾಡಿ, ರೈತರು ಮತ್ತು ಸಣ್ಣ ಪ್ರಮಾಣದ ಉದ್ಯಮಗಳು ಕೈಗೆಟುಕುವ ವಿದ್ಯುತ್ ಅನ್ನು ಹೆಚ್ಚಾಗಿ ಅವಲಂಬಿಸಿವೆ. ಖಾಸಗೀಕರಣವು ಸುಂಕಗಳನ್ನು ಹೆಚ್ಚಿಸಲು ಮತ್ತು ಪ್ರಸ್ತುತ ಕೃಷಿ ಮತ್ತು ಸಣ್ಣ ಕೈಗಾರಿಕೆಗಳನ್ನು ಬೆಂಬಲಿಸುವ ಸಬ್ಸಿಡಿಯನ್ನು ದುರ್ಬಲಗೊಳಿಸುತ್ತವೆ ಎಂದು ತಿಳಿಸಿದರು.ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎ. ದೇವದಾಸ್, ಉಪಾಧ್ಯಕ್ಷೆ ಎ. ಶಾಂತಾ, ಎಐಪಿಎಫ್ ನ ಕಿರಣ್ ಕುಮಾರ್, ಮುಖಂಡರಾದ ಹನುಮಪ್ಪ, ಶರ್ಮಾಸ್, ಸುರೇಶ್, ಚೇತನ್, ಮುರಳಿಕೃಷ್ಣ ಮತ್ತಿತರರಿದ್ದರು.
ಇದೇ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಪ್ರಸ್ತಾಪಿತ ವಿದ್ಯುತ್ ಮಸೂದೆಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.