ಒಳಮೀಸಲು ಸಮೀಕ್ಷೆ ಯಥಾವತ್‌ ಜಾರಿ ವಿರೋಧಿಸಿ 13ಕ್ಕೆ ಪ್ರತಿಭಟನೆ

KannadaprabhaNewsNetwork |  
Published : Aug 09, 2025, 12:00 AM IST
18ಸಿಎಚ್‌ಎನ್‌51ಚಾಮರಾಜನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ದಲಿತ ಮುಖಂಡ ಹಾಗೂ ಜಿ.ಪಂ. ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ಅ‍ವರು ಸುದ್ದಿಗೋಷ್ಠಿ ನಡೆಸಿದರು. | Kannada Prabha

ಸಾರಾಂಶ

ಒಳ ಮೀಸಲಾತಿ ನೀಡುವ ಸಂಬಂಧ ನ್ಯಾಯ ಮೂರ್ತಿ ನಾಗಮೋಹನ್‌ದಾಸ್ ಆಯೋಗ ಮಾಡಿರುವ ಸಮೀಕ್ಷೆಯನ್ನು ಯಥಾವತ್ ಜಾರಿ ಮಾಡಬಾರದು ಎಂದು ಆಗ್ರಹಿಸಿ ಆ. 13 ರಂದು ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಒಳ ಮೀಸಲಾತಿ ನೀಡುವ ಸಂಬಂಧ ನ್ಯಾಯ ಮೂರ್ತಿ ನಾಗಮೋಹನ್‌ದಾಸ್ ಆಯೋಗ ಮಾಡಿರುವ ಸಮೀಕ್ಷೆಯನ್ನು ಯಥಾವತ್ ಜಾರಿ ಮಾಡಬಾರದು ಎಂದು ಆಗ್ರಹಿಸಿ ಆ. 13 ರಂದು ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗಮೋಹನ್ ದಾಸ್ ನೇತೃತ್ವದ ಏಕ ಸದಸ್ಯ ಪೀಠವು ಸಮೀಕ್ಷೆ ಮಾಡುವಾಗ ಬಲಗೈ ಸಮುದಾಯಕ್ಕೆ ಸೇರಿದ ಇತರೆ ಉಪ ಜಾತಿಗಳನ್ನು ಎಡಗೈ ಸಮುದಾಯಕ್ಕೆ ಸೇರಿಸಿದ್ದಾರೆ. ಜೊತೆಗೆ ಐದು ಪಂಗಡಗಳಾಗಿ ವರ್ಗೀಕರಣ ಮಾಡುವಾಗ ಇಲ್ಲದ ಅದಿಕರ್ನಾಟಕ, ಆದಿದ್ರಾವಿಡ, ಆದಿ ಆಂಧ್ರ ಸಮುದಾಯಗಳಿಗೆ ಶೇ. 1 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಪರೈಯ್ಯ, ಪೆರವಗನ್ ಜಾತಿಯು ಬಲಗೈಗೆ ಸೇರಿದ್ದು, ಈ ಜಾತಿಯನ್ನು ಎಡಗೈಗೆ ಸೇರಿಸುವ ಮೂಲಕ ಆ ಜನಸಂಖ್ಯೆಯು ಹೆಚ್ಚಾಗುವಂತೆ ಮಾಡಲಾಗಿದೆ. ಇದರ ಬಗ್ಗೆ ಸರ್ಕಾರ ಕೂಲಂಕುಶವಾಗಿ ಪರಿಶೀಲನೆ ಮಾಡಿ, ನಂತರ ಮೀಸಲಾತಿಯನ್ನು ವರ್ಗೀಕರಣ ಮಾಡಬೇಕೆಂದು ಒತ್ತಾಯಿಸಿದರು.

ಸಮೀಕ್ಷೆ ಅವೈಜ್ಞಾನಿಕವಾಗಿದ್ದು, ಉದ್ದೇಶಪೂರ್ವಕವಾಗಿ ಹೆಚ್ಚು ಜನಸಂಖ್ಯೆ ಇರುವ ಬಲಗೈ ಸಮುದಾಯವನ್ನು ವಂಚಿಸಲಾಗುತ್ತಿದೆ. ಈ ವರದಿಯನ್ನು ಸರ್ಕಾರ ಯಥಾವತ್ ಜಾರಿ ಮಾಡದೇ ಸಚಿವ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿ, ನ್ಯೂನತೆಯನ್ನು ಸರಿಪಡಿಸಬೇಕು ಎಂದರು.ಈಗಾಗಲೇ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಸಮೀಕ್ಷೆಯಲ್ಲಿರುವ ನ್ಯೂನತೆ ಮತ್ತು ಲೋಪದೋಷಗಳನ್ನು ಪಟ್ಟಿ ಮಾಡಿ, ಸರ್ಕಾರಕ್ಕೆ ಮನವಿ ಮಾಡಿದೆ. ರಾಜ್ಯ ಸರ್ಕಾರ ಆ. 16 ರಂದು ಸಚಿವ ಸಂಪುಟ ಸಭೆಯಲ್ಲಿ ಈ ವರದಿಯನ್ನು ಅಂಗೀಕರಿಸುವ ಮುನ್ನಾ ವಿಸ್ಕೃತವಾಗಿ ಚರ್ಚಿಸಿ, ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಿ, ಆಗಿರುವ ಲೋಪದೋಷಗಳನ್ನು ಸರಿಪಡಿಸಿ ಅನುಷ್ಠಾನ ಮಾಡಬೇಕೇಂಬುವುದು ನಮ್ಮ ಸಮುದಾಯದ ಒತ್ತಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲು ಕರೆ ನೀಡಲಾಗಿದೆ ಎಂದರು.

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ಆ. 13 ರ ಬುಧವಾರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಈ ಪ್ರತಿಭಟನೆಗೆ ಜಿಲ್ಲೆಯ ಬಲಗೈ ಸಮುದಾಯದ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಮುಖಂಡರು. ಪ್ರಗತಿಪರ ಸಂಘಟನೆಗಳ ಮುಖಂಡರು, ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಿವಕುಮಾರ್ ಮನವಿ ಮಾಡಿದರು. ನಾಗಮೋಹನ್ ದಾಸ್ ನೇತೃತ್ವದ ತಂಡ ಸಮೀಕ್ಷೆ ನಡೆಸುವಾಗ ಅನೇಕ ವೈಜ್ಞಾನಿಕ ಅಂಶಗಳನ್ನು ಪರಿಗಣಿಸದೇ ಸಮೀಕ್ಷೆ ಮಾಡಿದ್ದು, ಸಮೀಕ್ಷೆಯನ್ನು ಮನೆ ಮನೆಗೆ ತೆರಳಿ ಶಿಕ್ಷಕರು ಮೊಬೈಲ್ ಆಪ್ ಮೂಲಕ ದಾಖಲು ಮಾಡಿಲ್ಲ. ಅಲ್ಲದೇ ಈ ಬಗ್ಗೆ ಸರಿಯಾದ ತರಬೇತಿಯನ್ನು ಅವರಿಗೆ ನೀಡಿಲ್ಲ. ಜೊತೆಗೆ ಸಮೀಕ್ಷೆ ನಡೆಸಲು ನಿಯೋಜನೆ ಮಾಡಿದ್ದ ಶಿಕ್ಷಕರು ಸಹ ಸರಿಯಾದ ಮಾರ್ಗದಲ್ಲಿ ಸಮೀಕ್ಷೆ ಮಾಡಿಲ್ಲ. ಬಹಳಷ್ಟ ಪ್ರದೇಶಗಳಿಗೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅಪ್‌ಲೋಡ್ ಆಗಿಲ್ಲ. ಡಿಜಿಟಲ್ ಮೊಬೈಲ್ ಬಗ್ಗೆ ಅರಿವು ಇಲ್ಲದ ಶಿಕ್ಷಕರು ಸಮೀಕ್ಷೆ ಮಾಡಿರುವುದು. ಕೆಲವು ಊರು ಹಾಗೂ ಪಟ್ಟಣಗಳಲ್ಲಿ ನಿಖರವಾದ ದತ್ತಾಂಶವನ್ನು ಸಂಗ್ರಹಿಸುವಲ್ಲಿ ವಿಫಲವಾಗಿದೆ ಎಂದರು.

ಈ ಹಿನ್ನೆಲೆಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು. ಕೈಬಿಟ್ಟಿರುವ ಜಾತಿಗಳನ್ನು ಬಲಗೈ ಗುಂಪಿಗೆ ಸೇರಿಸಿ, ಮೀಸಲಾತಿಯನ್ನು ವರ್ಗೀಕರಣ ಮಾಡಬೇಕೆಂದು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ತಾ.ಪಂ. ಮಾಜಿ ಸದಸ್ಯ ನಲ್ಲೂರು ಸೋಮೇಶ್ವರ್, ಕೊಳ್ಳೇಗಾಲ ಶಾಂತರಾಜು, ನಿರಂಜನ್, ಪುಟ್ಟರಾಜು, ಬೊಮ್ಮಯ್ಯ, ನಾಗವಳ್ಳಿ ನಾಗಯ್ಯ, ಹೆಬ್ಬಸೂರು ರಂಗಸ್ವಾಮಿ ಇತರರು ಇದ್ದರು.

PREV

Recommended Stories

ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ
12.69 ಲಕ್ಷ ಶಂಕಾಸ್ಪದ ಬಿಪಿಎಲ್‌ ಚೀಟಿ ರಾಜ್ಯದಲ್ಲಿ ಪತ್ತೆ: ಮುನಿಯಪ್ಪ