ವಿಬಿ ಜಿ ರಾಮ್ ಜಿ ಜಾರಿ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jan 30, 2026, 02:15 AM IST
29ಕೆಪಿಎಲ್‌05 ನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಜಾರಿ ಖಂಡಿಸಿ ಹಾಗೂ ಉದ್ಯೋಗ ಖಾತ್ರಿ ಯೋಜನೆ ಬಲಪಡಿಸುವಂತೆ ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

2005 ರಲ್ಲಿ ಜಾರಿಯಾದ ನರೇಗಾ ಯೋಜನೆಯು ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.

ಕೊಪ್ಪಳ: ನರೇಗಾ ರದ್ದುಗೊಳಿಸಿ ವಿಬಿ ಜಿ ರಾಮ್ ಜಿ ಜಾರಿ ಖಂಡಿಸಿ ಹಾಗೂ ಉದ್ಯೋಗ ಖಾತ್ರಿ ಯೋಜನೆ ಬಲಪಡಿಸುವಂತೆ ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ವಿಬಿ ಜಿ ರಾಮ್ ಜಿ ಮಸೂದೆ ತಕ್ಷಣವೇ ರದ್ದುಪಡಿಸಿ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿರುವ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿ ಯೋಜನೆ ಮರು ಸ್ಥಾಪಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮುಖಂಡ ಶರಣು ಗಡ್ಡಿ, 2005 ರಲ್ಲಿ ಜಾರಿಯಾದ ನರೇಗಾ ಯೋಜನೆಯು ಗ್ರಾಮೀಣ ಜನತೆ ಉದ್ಯೋಗಕ್ಕಾಗಿ ಪಟ್ಟಣಗಳಿಗೆ ವಲಸೆ ಹೋಗುವುದನ್ನು ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಆದರೆ ಈಗ ಅದೇ ಯೋಜನೆ ವಿಬಿ ಜಿ ರಾಮ್ ಜಿ ಎಂಬ ಹೆಸರಿನಲ್ಲಿ ಮೂಲ ಸ್ವರೂಪ ಬದಲಾಯಿಸಿ ಉದ್ಯೋಗ ಖಾತ್ರಿ ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಇದು ಗ್ರಾಮೀಣ ಬದುಕಿನ ಮೇಲೆ ನಡೆಯುತ್ತಿರುವ ಘೋರ ದಾಳಿ.ಅಗತ್ಯ ವಸ್ತುಗಳ ಬೆಲೆ ಏರಿಕೆ, ಕೃಷಿ ಉತ್ಪಾದನಾ ಸಾಮಗ್ರಿಗಳ ದುಬಾರಿ ಬೆಲೆ, ಪ್ರಾಕೃತಿಕ ವಿಕೋಪಗಳಿಂದ ರೈತರು ಮತ್ತು ಕೃಷಿ ಕಾರ್ಮಿಕರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ನರೇಗಾ ಯೋಜನೆ ದುರ್ಬಲಗೊಳಿಸುವುದು ಜನ ವಿರೋಧಿ ನೀತಿಯಾಗಿದೆ. ದೇಶದ 12 ಕೋಟಿಗೂ ಅಧಿಕ ಗ್ರಾಮೀಣ ಜನತೆ ಈ ಯೋಜನೆಯ ಮೇಲೆ ಅವಲಂಬಿತರಾಗಿದ್ದು ವಿಶೇಷವಾಗಿ ಮಹಿಳೆಯರಿಗೆ ಕನಿಷ್ಠ ಆರ್ಥಿಕ ಭದ್ರತೆ ನೀಡಿದ್ದ ನರೇಗಾ ಯೋಜನೆ ರದ್ದುಪಡಿಸುವುದರಿಂದ ನಿರುದ್ಯೋಗ ಮತ್ತು ವಲಸೆ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳಲಿವೆ ಎಂದು ಎಚ್ಚರಿಸಿದರು.

ಹೊಸ ಯೋಜನೆಯಡಿ ಕೂಲಿ ಹಣದ ಜವಾಬ್ದಾರಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸರ್ಕಾರ ಶೇ. 60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟು ಕೂಲಿ ಹಣ ನೀಡಬೇಕಾಗಿದೆ. ಆದರೆ ಈ ವ್ಯವಸ್ಥೆಯಿಂದ ಎರಡು ಸರ್ಕಾರಗಳ ನಡುವಿನ ಹೊಣೆಗಾರಿಕೆ ತಳ್ಳಾಟಕ್ಕೆ ಕೂಲಿ ಕಾರ್ಮಿಕರ ದುಡಿಮೆಯ ಹಣವೇ ಅಪಾಯಕ್ಕೆ ಸಿಲುಕಿದೆ.ಕಾರ್ಮಿಕರು ಬೆವರು ಸುರಿಸಿ ದುಡಿದರೂ ಅವರ ಕೈಗೆ ಸಮಯಕ್ಕೆ ಕೂಲಿ ಹಣ ಸಿಗುವ ಬಗ್ಗೆ ಯಾವುದೇ ಖಾತ್ರಿ ಉಳಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ಹಣಕಾಸಿನ ಕೊರತೆ ಮುಂದಿಟ್ಟು ಹೆಚ್ಚುವರಿ ಹಣ ವಿನಿಯೋಗಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಹಣ ಬಿಡುಗಡೆ ವಿಚಾರದಲ್ಲಿ ವಿಳಂಬವಾದರೆ ಅದರ ಸಂಪೂರ್ಣ ಹೊರೆ ಗ್ರಾಮೀಣ ಕೂಲಿ ಕಾರ್ಮಿಕರ ಮೇಲೆ ಬೀಳಲಿದೆ. ಇದರಿಂದ ಉದ್ಯೋಗ ಖಾತ್ರಿ ಯೋಜನೆಯ ಮೂಲ ಆಶಯವೇ ಹಾಳಾಗಿ, ನಿರುದ್ಯೋಗ, ಬಡತನ ಮತ್ತು ವಲಸೆ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದರು.

ಸಂಘಟನೆಯ ಮುಖಂಡ ಶರಣು ಪಾಟೀಲ್, ಶಾರದಾ ಗಡ್ಡಿ,ಮಂಗಳೇಶ್ ರಾಥೋಡ್, ದ್ಯಾಮಣ್ಣ ಡೊಳ್ಳಿನ, ಈರಪ್ಪ, ಲಕ್ಷ್ಮಣ, ಮುದಿಯಪ್ಪ, ಮಂಜುನಾಥ, ಸತ್ಯನಾರಾಯಣ ಸೇರಿದಂತೆ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಿನೇದಿನೇ ಏರುತ್ತಿರುವ ಚಿನ್ನದ ದರ ಇಳಿಯಲಿ ಎಂದು ಭಕ್ತನ ಹರಕೆ !
₹70 ಲಕ್ಷ ವಿದ್ಯುತ್‌ ಬಿಲ್‌ ಬಾಕಿ: ಸಿದ್ಧಗಂಗಾ ಮಠಕ್ಕೆ ನೀರು ಬಂದ್‌!