ಕನಕಪುರ: ನಗರಸಭೆಯಲ್ಲಿ ಆಯುಕ್ತರು ಸೇರಿ ಪ್ರಮುಖ ಹುದ್ದೆಗಳ ಖಾಲಿಯಿದ್ದು, ನಗರದ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು
ಕನಕಪುರ: ನಗರಸಭೆಯಲ್ಲಿ ಆಯುಕ್ತರು ಸೇರಿ ಪ್ರಮುಖ ಹುದ್ದೆಗಳ ಖಾಲಿಯಿದ್ದು, ನಗರದ ಆಡಳಿತ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ಆರೋಪಿಸಿ ಶ್ರೀರಾಮಸೇನೆ ಕಾರ್ಯಕರ್ತರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಶ್ರೀರಾಮಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ನಗರಸಭೆಯ ಆಡಳಿತ ವೈಫಲ್ಯದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಗರಸಭೆಗೆ ಪೂರ್ಣಕಾಲಿಕ ಆಯುಕ್ತರಿಲ್ಲದೆ ಸಾರ್ವಜನಿಕರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ನಗರದ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛತೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಸಾರ್ವಜನಿಕರಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳ ಕೊರತೆ ಅಡ್ಡಿಯಾಗುತ್ತಿದೆ. ಜನಸಾಮಾನ್ಯರು ತಮ್ಮ ಕೆಲಸಗಳಿಗಾಗಿ ನಗರಸಭೆಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
15 ದಿನಗಳ ಗಡುವು:
ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಾರ್ಜುನಗೌಡ ಮಾತನಾಡಿ, ನಗರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅಧಿಕಾರಿಗಳ ಕೊರತೆಯಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಸರ್ಕಾರ ಮತ್ತು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಗರಸಭೆಗೆ ಅಗತ್ಯ ಅಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಇಂದಿನಿಂದ 15 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ಈ ಗಡುವಿನೊಳಗೆ ನಗರಸಭೆಗೆ ಅಗತ್ಯ ಅಧಿಕಾರಿಗಳನ್ನು ನೇಮಕ ಮಾಡಿ ಆಡಳಿತ ವ್ಯವಸ್ಥೆಯನ್ನ ಸರಿಪಡಿಸದಿದ್ದರೆ, ಶ್ರೀರಾಮಸೇನೆ ವತಿಯಿಂದ ನಗರಸಭೆ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾಧ್ಯಕ್ಷ ಪರಮೇಶ್ ಗೌಡ, ಜಿಲ್ಲಾ ಉಪಾಧ್ಯಕ್ಷ ರಾಜಗೋಪಾಲ್, ಪ್ರದಾನ ಕಾರ್ಯದರ್ಶಿ ಸಾಗರ್, ನಗರಾಧ್ಯಕ್ಷ ಚೇತನ್ ಕುಮಾರ್, ಕಾರ್ಯಕರ್ತರಾದ ಕುಮಾರ್, ಚೀರಣಕುಪ್ಪೆ ಕುಮಾರ್, ಪುಟ್ಟರಾಜು, ಜಗದೀಶ್, ಕೆ. ಆರ್ ಸುರೇಶ್, ಮಹಿಳಾ ಪದಾಧಿಕಾರಿಗಳಾದ ರೇಖಾ, ವರ್ಷಿತ ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 01:
ಕನಕಪುರದಲ್ಲಿ ಜಿಲ್ಲಾ ಶ್ರೀರಾಮಸೇನೆ ಕಾರ್ಯಕರ್ತರು ನಗರಸಭೆ ಆಡಳಿತ ವೈಫಲ್ಯದ ವಿರುದ್ಧ ಪ್ರತಿಭಟನೆ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.