ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಟಿ.ವಿ.ಸಿದ್ದರಾಜು ಅವರ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ ಮೆರವಣಿಗೆ ಹೊರಟು ನಗರಸಭೆ ಮುಂಭಾಗಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಪೌರಾಯುಕ್ತ ರಾಮದಾಸ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವೇದಿಕೆ ಜಿಲ್ಲಾಧ್ಯಕ್ಷ ಟಿ.ವಿ.ಸಿದ್ದರಾಜು ಮಾತನಾಡಿ, ನಗರಸಭೆಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳು ಯಾವುದು ಸರಿಯಾಗಿ ನಡೆಯುತ್ತಿಲ್ಲ. ಸಾರ್ವಜನಿಕರು ಇ-ಸ್ವತ್ತು ಮಾಡಲು ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಒದಗಿಸಿದರೂ ಯಾವುದೇ ಕೆಲಸ ಆಗುತ್ತಿಲ್ಲ. ನಿಯಮದ ಪ್ರಕಾರ ನಾವು ದಾಖಲಾತಿಗಳನ್ನು ಕೊಟ್ಟ 45 ದಿನಗಳಲ್ಲಿ ಇ-ಸ್ವತ್ತು ಮಾಡಿಕೊಡಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ ಆದರೂ ಯಾವುದೇ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.ನಗರಸಭೆಯಲ್ಲಿ ಸಾರ್ವಜನಿಕರ ಬದಲು ಬರೀ ದಲ್ಲಾಳಿಗಳೆ ಅಡ್ಡಾಡುತ್ತಿದ್ದಾರೆ. ಇ-ಸ್ವತ್ತು ಮಾಡಿಕೊಡಲು ಸಾರ್ವಜನಿಕರಿಂದ 20-25 ಸಾವಿರ ರು.ಗಳನ್ನು ವಸೂಲಿ ಮಾಡುತ್ತಿದ್ದಾರೆ. ದಲ್ಲಾಳಿಗಳಿಗೆ ಹಣ ಕೊಟ್ಟರೆ ದಲ್ಲಾಳಿಗಳ ಮುಖಾಂತರ ಇ-ಸ್ವತ್ತು ಒಂದು ತಿಂಗಳಲ್ಲೇ ಆಗುತ್ತದೆ. ಆದರೆ ಸಾರ್ವಜನಿಕರು ಕೊಟ್ಟ ಇ-ಸ್ವತ್ತಿನ ಅರ್ಜಿಗಳೇ ಕಣ್ಮರೆ ಆಗುತ್ತಿವೆ. ದಲ್ಲಾಳಿಗಳೊಂದಿಗೆ ಅಧಿಕಾರಿಗಳು ಶಾಮೀಲಾಗಿ ಲಂಚ ಪಡೆದು ಕೆಲಸ ಮಾಡಿಕೊಡುತ್ತಿವುದೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿದರು.
ಚಾ-ನಗರದಲ್ಲಿ ಸಂಪಿಗೆ ರಸ್ತೆ ಮತ್ತು ಭ್ರಮರಾಂಭ ಬಡಾವಣೆಯ 1ನೇ ಕ್ರಾಸ್‌ನಲ್ಲಿ ಒಳಚರಂಡಿ ವ್ಯವಸ್ಥೆ ಅಸ್ತವ್ಯಸ್ತ ಆಗಿದ್ದು, ಮಳೆ ಬಂದರೆ ಚರಂಡಿಯ ಬದಲು ರಸ್ತೆಗಳಲ್ಲಿ ನೀರು ನದಿಯಂತೆ ಹರಿಯುತ್ತಿವೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಆಪಾದಿಸಿದರು.
ನಗರದ 209ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್‌ಗಳಲ್ಲಿ ಬೀದಿ ದೀಪಗಳ ಕಂಬಗಳು ಹಾಕಿದ್ದು ಸಂತೇಮರಹಳ್ಳಿ ವೃತ್ತದಿಂದ ಸಂತೇಮರಹಳ್ಳಿಗೆ ಹೋಗುವ ರಸ್ತೆ ಮತ್ತು ಮೈಸೂರು ರಸ್ತೆ, ಫಾರೆಸ್ಟ್ ಸರ್ಕಲ್‌ನಿಂದ ಸತ್ತಿ ಮಂಗಲದ ರಸ್ತೆಯಲ್ಲಿ ಬರೀ ಕಂಬಗಳನ್ನು ಅಳವಡಿಸಿ ಯಾವುದೇ ಬೀದಿದೀಪ ಸಂಪರ್ಕ ಕೊಟ್ಟಿಲ್ಲ. ಇದರಿಂದ ಈ ರಸ್ತೆಗಳಲ್ಲಿ ರಾತ್ರಿ 7 ಗಂಟೆ ನಂತರ ಹೆಂಗಸರು, ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಮತ್ತು ಭಯದಿಂದ ಓಡಾಡಬೇಕಾದ ದುಸ್ಧಿತಿ ಉದ್ಭವವಾಗಿದೆ. ಇದಕ್ಕೆಲ್ಲ ನಗರಸಭೆಯ ಅಧಿಕಾರಿಗಳ ಬೇಜಾವಾಬ್ದಾರಿತನ ಮತ್ತು ಲಂಚದ ದುರಾಸೆಯೇ ಕಾರಣ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನಾರಾಯಣ್, ವೇದಿಕೆ ಯ ಜಿಲ್ಲಾ ಗೌರವಾಧ್ಯಕ್ಷ ಮಸಣಶೆಟ್ಟಿ, ಉಪಾಧ್ಯಕ್ಷ ಕೆ.ಟಿ.ಆನಂದ್, ಟೌನ್ ಉಪಾಧ್ಯಕ್ಷ ಯೋಗೇಶ್, ತಾಲೂಕು ಅಧ್ಯಕ್ಷ ಶಿವಣ್ಣ, ಆಟೋ ಸಂಘದ ಉಪಾಧ್ಯಕ್ಷ ಸಿದ್ದರಾಜು, ಕಾರ್ಯದರ್ಶಿ ಗೋವಿಂದ ನಾಯಕ, ಮಂಜು, ರಾಜೇಂದ್ರ, ಚೆನ್ನುಗಶೆಟ್ಟಿ, ಅನಿಲ್ ನಾಯಕ್ ಮತ್ತಿತರರಿದ್ದರು.