ಗದಗ: ಉತ್ತರಾಖಂಡದ ಹಲದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಹಿಂದೂಪರ ಸಂಘಟನೆಗಳು ಗೋಮೂತ್ರ ಸಿಂಪಡಿಸಿ ಶುದ್ಧೀಕರಣ ಹಾಗೂ ಹೋಮ, ಹವನ ನಡೆಸಿರುವುದನ್ನು ಖಂಡಿಸಿ ಮಂಗಳವಾರ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ಹಾಗೂ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಅಶೋಕ ಬರಗುಂಡಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸಂವಿಧಾನ ಕಟ್ಟಿಕೊಟ್ಟ ನಾಡಿನಲ್ಲಿ ಇಂದಿಗೂ ಅಸ್ಪೃಶ್ಯತೆ ಮತ್ತು ಜಾತೀಯತೆ ಜೀವಂತವಾಗಿದೆ ಎಂಬುದನ್ನು ಮನುವಾದಿಗಳು ತೋರಿಸಿಕೊಟ್ಟಿದ್ದಾರೆ. ಹಿಂದೆ ಬಾಬು ಜಗಜೀವನ್‌ರಾಂ ಅವರಿಗೂ ಇದೇ ರೀತಿ ಮೂರ್ತಿ ಅನಾವರಣದ ವೇಳೆ ಅಪಮಾನ ಮಾಡಲಾಗಿತ್ತು. ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಮುಖ ನಾಯಕರು. ಅವರಿಗೆ ಜಾತಿಯ ಹೆಸರಿನಲ್ಲಿ ಅಪಮಾನ ಮಾಡಿರುವುದು ನಾಡಿನ ಆತ್ಮಸಾಕ್ಷಿಗೆ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸವರಾಜ ಕಡೇಮನಿ ಮಾತನಾಡಿ, ರಾಷ್ಟ್ರಮಟ್ಟದ ಹಿರಿಯ ನಾಯಕರಿಗೇ ಈ ಮಟ್ಟದ ಜಾತಿ ತಾರತಮ್ಯ ಎದುರಾದರೆ ಸಾಮಾನ್ಯ ಜನರ ಪರಿಸ್ಥಿತಿ ಏನು? ದೇಶದಲ್ಲಿ ಇಂತಹ ಹೀನ ಕೃತ್ಯಗಳು ಮರುಕಳಿಸುತ್ತಿರುವುದನ್ನು ಪ್ರತಿಯೊಬ್ಬರೂ ಖಂಡಿಸಬೇಕು. ಅನ್ಯಾಯದ ವಿರುದ್ಧ ಮುಂದಿನ ದಿನಗಳಲ್ಲಿ ಗದಗ ಬಂದ್ ಕರೆ ನೀಡಿ ಉಗ್ರ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.ಮುಖಂಡ ಮಾರ್ತಾಂಡಪ್ಪ ಹಾದಿಮನಿ ಮಾತನಾಡಿ, ದೇಶದ ಮೂಲ ನಿವಾಸಿಗಳಾದ ಶೋಷಿತರಿಗೆ ಅವಮಾನ ಸಹಿಸಲು ಸಾಧ್ಯವಿಲ್ಲ. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಶಕ್ತಿಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.