ಹೊಸಪೇಟೆ: ಕುಟುಂಬಗಳ ತಲಾ ಆದಾಯದ ಕಾರಣವನ್ನು ಇಟ್ಟುಕೊಂಡು ಏಕಾಏಕಿ ಸಾವಿರಾರು ಬಡವರ ಬಿಪಿಎಲ್ ಕಾರ್ಡ್ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಸ್ಲಂ ಜನರ ಸಂಘಟನೆ ಹಾಗೂ ನಗರ ವಿಕಲಚೇತನರ ಸಂಘಟನೆಯ ಸದಸ್ಯರು ಇಲ್ಲಿನ ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಬಳಿಕ ಗ್ರೇಡ್-2 ತಹಸೀಲ್ದಾರ್ ಆಶ್ರಿತ್ ವೆಂಕಟೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಆಹಾರ ಇಲಾಖೆಯು ಕುಟುಂಬದ ಸದಸ್ಯರ ತಲಾ ಆದಾಯವನ್ನು ಕ್ರೋಢೀಕರಿಸುವಾಗ ಆ ಪಡಿತರ ಚೀಟಿಯ ಕುಟುಂಬದ ಸದಸ್ಯರಲ್ಲಿ ವಿಶೇಷ ಚೇತನರು, ಮಕ್ಕಳು, ವೃದ್ಧರು, ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರು, ದೈಹಿಕವಾಗಿ ಬಲಹೀನಗೊಂಡವರು, ದುಡಿಯಲು ಆಗದ ಅಶಕ್ತರು, ಇರುವುದನ್ನು ಅಂದಾಜಿಸದೆ ತಮ್ಮ ಸರ್ವಾಧಿಕಾರ ಹಾಗೂ ಕುರುಡು ನಿಯಮವನ್ನು ಜಾರಿಗೆ ತರುವುದರ ಮೂಲಕ ದೊಡ್ಡ ಎಡವಟ್ಟು ಮಾಡಿದೆ. ಈ ಎಡವಟ್ಟಿನಿಂದಾಗಿ ಹೊಸಪೇಟೆ ತಾಲೂಕಿನಲ್ಲಿ 1500ಕ್ಕೂ ಹೆಚ್ಚು ಪಡಿತರ ಚೀಟಿಗಳು ರದ್ದಾಗಿದ್ದು, 9 ಸಾವಿರಕ್ಕೂ ಹೆಚ್ಚು ಪಡಿತರ ಚೀಟಿಗಳು ಸ್ಥಗಿತಗೊಂಡಿವೆ. ಕೂಡಲೇ ಸರ್ಕಾರ ಆಹಾರ ಇಲಾಖೆ ಎಡವಟ್ಟನ್ನು ಸರಿಪಡಿಸಿ ಅರ್ಹ ಎಲ್ಲರಿಗೆ ಪಡಿತರ ಚೀಟಿಗಳನ್ನು ನೀಡಿ ಪಡಿತರ ಆಹಾರ ಧಾನ್ಯವನ್ನು ವಿತರಿಸುವಂತೆ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಲೋಹಿತ್, ಅಂಜಿನಿ, ಹುಲಿಗೆಮ್ಮ, ಮೌನೇಶ್, ಕೆ. ನಿಂಗಪ್ಪ, ಹನುಮಂತ, ಖಾಜಬನ್ನಿ, ಶೇಕ್ಷಾವಲಿ ಮತ್ತಿತರರಿದ್ದರು.