ವಕ್ಫ್‌ ಮಂಡಳಿ ಹೆಸರಿನ ಆಸ್ತಿ ಅಲ್ಲಾನ ಆಸ್ತಿನಾ?: ಜೋಶಿ ಕಿಡಿ

KannadaprabhaNewsNetwork |  
Published : Oct 30, 2024, 12:39 AM IST
464 | Kannada Prabha

ಸಾರಾಂಶ

ರೈತರ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು ಬರಲು ಕಾಂಗ್ರೆಸ್ ಮತ್ತು ಜಮೀರ್ ಅಹ್ಮದ್ ಕುಮ್ಮಕ್ಕು ಇದೆ. ಇವರೆಲ್ಲರೂ ಸೇರಿ ಜನರನ್ನು ಭಯಭೀತ ಮಾಡುತ್ತಿದ್ದಾರೆ. ಅನ್ವರ್ ಮಲ್ಪಾಡಿ ವರದಿಯಲ್ಲಿ ಆಸ್ತಿ ಕಬಳಿಕೆ ಪ್ರಸ್ತಾಪ ಇದೆ. ಅನೇಕ ಕಾಂಗ್ರೆಸ್ ಮುಖಂಡರು ವಕ್ಫ್‌ ಆಸ್ತಿ ತಮ್ಮದು ಮಾಡಿಕೊಂಡಿದ್ದಾರೆ ಎಂದು ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ಧಾರವಾಡ:

ವಕ್ಫ್‌ ಮಂಡಳಿ ಹೆಸರಿನಲ್ಲಿರುವ ಆಸ್ತಿಯನ್ನು ಯಾವನೋ ಒಬ್ಬ ಅಲ್ಲಾನ ಆಸ್ತಿ ಎಂದಿದ್ದು, ಅಲ್ಲಾ ಇಲ್ಲಿಯವನಾ? ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಪಹಣಿಯಲ್ಲಿ ವಕ್ಫ್‌ ಮಂಡಳಿ ಹೆಸರು ಬರಲು ಕಾಂಗ್ರೆಸ್ ಮತ್ತು ಜಮೀರ್ ಅಹ್ಮದ್ ಕುಮ್ಮಕ್ಕು ಇದೆ. ಇವರೆಲ್ಲರೂ ಸೇರಿ ಜನರನ್ನು ಭಯಭೀತ ಮಾಡುತ್ತಿದ್ದಾರೆ. ಅನ್ವರ್ ಮಲ್ಪಾಡಿ ವರದಿಯಲ್ಲಿ ಆಸ್ತಿ ಕಬಳಿಕೆ ಪ್ರಸ್ತಾಪ ಇದೆ. ಅನೇಕ ಕಾಂಗ್ರೆಸ್ ಮುಖಂಡರು ವಕ್ಫ್‌ ಆಸ್ತಿ ತಮ್ಮದು ಮಾಡಿಕೊಂಡಿದ್ದಾರೆ. ಬಡ ಮುಸ್ಲಿಮರ ಆಸ್ತಿಯನ್ನೂ ಕಬಳಿಸುತ್ತಿದ್ದಾರೆ. ಅವರಿಗೆ ಅಲ್ಲಾ ಸಂಬಂಧ ಇಲ್ಲವಾ? ಅಲ್ಲಾ ಹೆಸರು ಹೇಳಿ ಹೀಗೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ನೆಹರು ಕಾಲದಲ್ಲಿ ಕಾಂಗ್ರೆಸ್‌ ವಕ್ಫ್ ಕಾನೂನು ಮಾಡಿದೆ. ಏಕೆ ಮಾಡಿತು ಎಂಬುದು ಗೊತ್ತಿಲ್ಲ. ಆದರೆ, ದೇಶದಲ್ಲಿ ಯಾವ ವಿಭಾಗಕ್ಕೂ ಇರಲಾರದ ಅಧಿಕಾರ ಕೊಟ್ಟರು. ಸುಪ್ರೀಂಕೋರ್ಟ್‌ಗೂ ವಕ್ಫ್‌ ನೋಟಿಫಿಕೇಷನ್ ವಿಚಾರಿಸುವ ಆಧಿಕಾರ ಇಲ್ಲ ಎನ್ನುವುದು ಹುಚ್ಚು ಧೈರ್ಯ ಎನ್ನಬೇಕಾ? ಮೈಯೊಳಗಿನ ಸೊಕ್ಕು ಎನ್ನಬೇಕಾ? ಉಪಚುನಾವಣೆ ಮತ್ತು ಬೇರೆ ಚುನಾವಣೆಗಳು ನಡೆದಿವೆ. ಹೀಗಾಗಿ ಈಗ ಆಗಿರುವುದನ್ನು ಹಿಂದೆ ತೆಗೆದುಕೊಳ್ಳುತ್ತೇವೆ ಎನ್ನುತ್ತಿದ್ದಾರೆ ಎಂದು ಜೋಶಿ ಕಿಡಿಕಾರಿದರು.

ಯಾವ ರೈತ ಅಧಿಕಾರಿ ಬಳಿ ಬರುವ ಅಗತ್ಯತೆ ಇಲ್ಲ. ನೋಟಿಸ್ ಕೊಟ್ಟ ತಹಸೀಲ್ದಾರ್ ಅಮಾನತು ಮಾಡಬೇಕು. ಇಲ್ಲಿ ಕೆಲವರ ಪಹಣಿಯಲ್ಲಿ ವಕ್ಫ್ ಹೆಸರು ಸೇರಿಸಿದ್ದಾರೆ. ತಹಸೀಲ್ದಾರ್‌ ಆಸ್ತಿ ಸಹ ಬರೆದುಕೊಡ್ತಾರಾ ಎಂದು ಪ್ರಶ್ನಿಸಿದ ಜೋಶಿ, ಯಾರು ಬೇಕಾದರೂ ಯಾವುದೇ ಆಸ್ತಿ ನಮ್ಮದು ಎನ್ನಬಹುದಾ? ಇನ್ಮುಂದೆ ಹೀಗಾಗಬಾರದು ಎಂದಾದರೆ, ಪೂರ್ಣ ವಕ್ಫ್ ಕಾನೂನನ್ನೇ ತೆಗೆಯಬೇಕು. ಆದರೆ, ಸದ್ಯ ನರೇಂದ್ರ ಮೋದಿ ಸರ್ಕಾರ ಈ ಕಾನೂನಿಗೆ ತಿದ್ದುಪಡಿ ಮಾಡುತ್ತಿದ್ದು, ಕಾಂಗ್ರೆಸ್ ತಿದ್ದುಪಡಿಗೆ ವಿರೋಧ ಮಾಡುತ್ತಿದೆ. ಸಂಸತ್ತಿನಲ್ಲಿ ವಿಷಯ ಪ್ರಸ್ತಾಪಿಸಲು ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾಬನೊಬ್ಬ ನಮ್ಮ ಅಜ್ಜ, ಮುತ್ತ್ಯಾ ನಮಾಜ್ ಮಾಡಿದ್ದ ಜಾಗವನ್ನೂ ನಮ್ಮ ವಕ್ಫ್ ಆಸ್ತಿ ಎನ್ನಬಹುದು. ಏನೇ ಇರಲಿ ಅದಕ್ಕೊಂದು ಮಿತಿ ಇರಬೇಕು. ಆದರೆ, ಇದಕ್ಕೆ ಮಿತಿ ಇಲ್ಲ. ನಮಾಜ್ ಬಿದ್ದ ಸ್ಥಳವೆಲ್ಲ ವಕ್ಫ್‌ ಆಸ್ತಿ ಎನ್ನುತ್ತಾರೆ. ಇದು ಮುಸ್ಲಿಂ ತುಷ್ಟೀಕರಣ ರಾಜಕಾರಣದಿಂದಲೇ ಆಗಿದೆ. ವಿಜಯಪುರ ಜಿಲ್ಲಾಧಿಕಾರಿಗಳು ರೈತರಿಗೆ ದಾಖಲೆ ತನ್ನಿ ಎಂದಿದ್ದಾರೆ. ರೈತರೇಕೆ ದಾಖಲೆ ತರಬೇಕು? ಜಿಲ್ಲಾಧಿಕಾರಿಯದ್ದೇ ಕೆಲಸ ಅದು. ಜಿಲ್ಲಾಧಿಕಾರಿ ಯಾರನ್ನು ಕೇಳಿ ನೋಟಿಸ್ ಕೊಟ್ಟರು ಎಂದು ಜೋಶಿ ಪ್ರಶ್ನಿಸಿದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ