ಪುರಸಭೆಯಲ್ಲಿ ಗುರುವಾರ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಏಕವಚನ ಬಳಸಿ ಮಾತನಾಡಿದರೆಂದು ಆರೋಪಿಸಿ, ಸದಸ್ಯರು ಬಾವಿಗಿಳಿದು ಧರಣಿ ನಡೆಸಿದ್ದಾರೆ.
- ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಕ್ಷಮೆ ಕೋರಿದ ಅಧ್ಯಕ್ಷ ಹನುಮಂತಪ್ಪ
- - -
ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪುರಸಭೆಯಲ್ಲಿ ಗುರುವಾರ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಏಕವಚನ ಬಳಸಿ ಮಾತನಾಡಿದರೆಂದು ಆರೋಪಿಸಿ, ಸದಸ್ಯರು ಬಾವಿಗಿಳಿದು ಧರಣಿ ನಡೆಸಿದರು.
ಪುರಸಭೆ ಸಭಾಂಗಣದಲ್ಲಿ ಜಮಾ ಖರ್ಚು, ಉಳಿಕೆ ಅನುದಾನಗಳ ಬಳಕೆ, ಶಿಥಿಲ ನೀರಿನ ಟ್ಯಾಂಕ್ ತೆರವು ಹಾಗೂ ಇನ್ನಿತರೆ ವಿಷಯಗಳ ಚರ್ಚಿಸಲು ಅಧ್ಯಕ್ಷ ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಸಭೆ ಆರಂಭ ಆಗುತ್ತಿದ್ದಂತೆ ಸದಸ್ಯ ನಯಾಜ್ ಮಾತನಾಡಿ, ಕೆಲ ದಿನಗಳ ಹಿಂದೆ ಕರೆದ ಎಲ್ಲ ಮುಖ್ಯ ಶಿಕ್ಷಕರ ಒಳಗೊಂಡ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಗೆ ಸದಸ್ಯರನ್ನು ಯಾಕೆ ಆಹ್ವಾನಿಸಲಿಲ್ಲ ಎಂದು ಪ್ರಶ್ನೆ ಮಾಡಿದರು.
ಆಗ ಅಧ್ಯಕ್ಷ ಹನುಮಂತಪ್ಪ ಅವರು ಏಕವಚನ ಬಳಕೆ ಮಾಡಿದ್ದನ್ನು ಖಂಡಿಸಿ, ಸದಸ್ಯರೆಲ್ಲ ಅಧ್ಯಕ್ಷರ ಮುಂಭಾಗದಲ್ಲಿ ಧರಣಿ ನಡೆಸಿ, ಕ್ಷಮೆ ಕೇಳಬೇಕೆಂದು ಪಟ್ಟುಹಿಡಿದರು. ಒಂದು ಗಂಟೆ ಕಾಲ ಸಭೆ ಸ್ಥಗಿತವಾಯಿತು.
ಅನಂತರ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ತಾವು ಏಕವಚನ ಮಾತಾಡಿದ್ದು ತಪ್ಪಾಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸುತ್ತೇನೆ. ಸಭೆ ನಡೆಯಲು ಅವಕಾಶ ನೀಡಿ ಎಂದು ಮನವಿ ಮಾಡಿದರು. ಬಳಿಕ ಸದಸ್ಯರು ಸಭೆ ಮುಂದುವರಿಸಿದರು.
ಮೇ ಮಾಹೆಯ ಜಮಾ ಖರ್ಚು, ವಿವಿಧ ವಾರ್ಡ್‌ಗಳಲ್ಲಿ ಮತ್ತೆ ಅವಲಕ್ಕಿ ಮತ್ತು ಅಕ್ಕಿ ಗಿರಣಿಗಳ ಧೂಳು, ಟೆಂಡರ್ ಕರೆಯದ ಮಳಿಗೆಗಳ ಹರಾಜು, ಕೊಳವೆಬಾವಿಗೆ ಮೋಟಾರ್‌ಗಳ ಅಳವಡಿಕೆ, ನೀರಗಂಟಿಗಳ ನೀರು ನಿರ್ವಹಣೆ, ಪೌರ ಕಾರ್ಮಿಕರ ಸಂಕಷ್ಠ ಭತ್ಯೆ ಕಾಯ್ದಿರಿಸುವುದು,ಕಚೇರಿಗೆ ಮಳೆ ನೀರು ಕೊಯ್ಲು ಅಳವಡಿಕೆ ಮತ್ತಿತರೆ ವಿಷಯಗಳ ಬಗ್ಗೆ ಸದಸ್ಯರಾದ ಕೆ.ಜಿ ಲೋಕೇಶ್,ವೀರಯ್ಯ, ಮಂಜಣ್ನ, ದಾದಾಪೀರ್, ಮಂಜುಳಾ, ಸಾಬಿರ್ ಅಲಿ, ಆರೀಫ್ ಅಲಿ ಇತರರು ಚರ್ಚೆಯಲ್ಲಿ ಭಾಗಿಯಾದರು.
ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜು, ಮುಖ್ಯಾಧಿಕಾರಿ ಜಯಲಕ್ಷ್ಮೀ ಹಾಜರಿದ್ದರು.
- - -
-ಚಿತ್ರ-೨.ಜೆಪಿಜಿ:
ಮಲೇಬೆನ್ನೂರು ಪುರಸಭೆ ಅಧ್ಯಕ್ಷರು ಏಕವಚನ ಬಳಸಿ ಮಾತನಾಡಿದ್ದು, ಕ್ಷಮೆ ಯಾಚಿಸಲು ಒತ್ತಾಯಿಸಿ ಸಭೆಯಲ್ಲಿ ಸದಸ್ಯರು ಧರಣಿ ನಡೆಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.