ಆಷಾಢ ಶುಕ್ರವಾರ ಮಹಾಲಕ್ಷ್ಮೀ ಅಲಂಕಾರ

KannadaprabhaNewsNetwork |  
Published : Jun 28, 2025, 12:29 AM IST
10 | Kannada Prabha

ಸಾರಾಂಶ

ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿಯನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು.

ಕನ್ನಡಪ್ರಭ ವಾರ್ತೆ ಮೈಸೂರುಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆದು ಪುನೀತ ಭಾವ ತಾಳಿದರು.ತಾಯಿ ಚಾಮುಂಡೇಶ್ವರಿಗೆ ಬೆಳಗಿನ ಜಾವದಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿತು. ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.ವಿವಿಧ ಬಗೆಯ ಹೂವುಗಳಿಂದ ಚಾಮುಂಡೇಶ್ವರಿ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಗುಲಾಬಿ, ತೆಂಗಿನಗರಿ, ಭತ್ತದ ತೆನೆ ಮೂಲಕ ದೇವಸ್ಥಾನದ ಆವರಣ ಮತ್ತು ಗರ್ಭಗುಡಿ ಹಾಗೂ ಪ್ರಾಂಗಣವನ್ನು ಅಲಂಕಾರಿಸಲಾಗಿತ್ತು.ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಚಾಮುಂಡೇಶ್ವರಿಯನ್ನು ನೋಡಿ ಭಕ್ತರು ಕಣ್ತುಂಬಿಕೊಂಡರು. ದೇವರ ದರ್ಶನಕ್ಕೆ ನೂಕು ನುಗ್ಗುಲು ಉಂಟಾಗದಂತೆ ಬ್ಯಾರಿಕೆಡ್ ಅಳವಡಿಸಲಾಗಿತ್ತು. 2000 ರೂ. ಹಾಗೂ 300 ರೂ. ಟಿಕೆಟ್ ಖರೀದಿ ಮಾಡಿ ಬರುವವರಿಗೆ ಪ್ರತ್ಯೇಕ ದರ್ಶನದ ವ್ಯವಸ್ಥೆ ಮಾಡಲಾಗಿತ್ತು.ಧರ್ಮ ದರ್ಶನಕ್ಕೆ ವಾಹನ ನಿಲುಗಡೆ ಸ್ಥಳದಿಂದ ಸೌಲಭ್ಯ ಕಲ್ಪಿಸಿದ್ದರೆ, ಮೆಟ್ಟಿಲುಗಳ ಮೂಲಕ ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಿದ್ದರಿಂದ ಬೆಟ್ಟದಲ್ಲಿ ವಾಹನ ದಟ್ಟಣೆ ಕಂಡು ಬರಲಿಲ್ಲ. ಬದಲಿಗೆ ಎಲ್ಲರೂ ಸಾರಿಗೆ ಬಸ್‌ ಸೌಲಭ್ಯದ ಮೂಲಕವೇ ಬೆಟ್ಟಕ್ಕೆ ಆಗಮಿಸಿದರು.ಲಲಿತಮಹಲ್ ಮೈದಾನದಿಂದ ಉಚಿತ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಕುಡಿಯುವ ನೀರು, ಶೌಚಾಲಯ, ಮೂಲಭೂತ ಸೌಕರ್ಯಗಳ ವ್ಯವಸ್ಥೆ ಅಚ್ಚುಕಟ್ಟಾಗಿತ್ತು.ಚಾಮುಂಡಿ ಬೆಟ್ಟಕ್ಕೆ ಶಾಸಕ ಜಿ.ಟಿ. ದೇವೇಗೌಡ ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಟುಂಬ ಸಮೇತರಾಗಿ ತೆರಳಿ ನಾಡಿಗೆ ಒಳಿತಾಗಲೆಂದು ಪ್ರಾರ್ಥಿಸಿದರು. ಅಂತೆಯೇ ಶಾಸಕ ನರೇಂದ್ರಸ್ವಾಮಿ ಕೂಡ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.ಬಿಗ್‌ಬಾಸ್‌ ಖ್ಯಾತಿಯ ಅನುಷ ರೈ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು, ನಾನು ಚಿಕ್ಕವಳಿದ್ದಾಗಿನಿಂದಲೂ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದೇನೆ. ತಾಯಿ ಬಳಿ ಬೇಡಿಕೊಂಡಿದ್ದು ಈಡೇರಿದೆ. ಇಲ್ಲಿ ದೇವರ ದರ್ಶನ ಪಡೆಯುವುದು ಪುಣ್ಯದ ಕಾರ್ಯ. ಇಂದು ಮೊದಲ ಆಷಾಢ ಶುಕ್ರವಾರವಾದ್ದರಿಂದ ಇಲ್ಲಿ ಬಂದು ದೇವರ ದರ್ಶನ ಪಡೆದಿರುವುದಾಗಿ ಅವರು ಹೇಳಿದರು.ಅಂತೆಯೇ ಚಾಮುಂಡಿ ಬೆಟ್ಟಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಹಾಗು ಪುತ್ರ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಕೂಡ ಭೇಟಿ ನೀಡಿದ್ದರು. ರೇವಣ್ಣ ಅವರು ಕಪ್ಪು ಕನ್ನಡಕ ಧರಿಸಿ ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡದ್ದು ವಿಶೇಷ.--- ಬಾಕ್ಸ್ 1--

-- ಕಾದು ನಿಂತ ಜಿಲ್ಲಾಧಿಕಾರಿ--ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರೂ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಯಿತು. ಆರಂಭದಲ್ಲಿ ವಿಐಪಿಗಳು ದೇಗುಲ ಪ್ರವೇಶಿಸುವ ಮಾರ್ಗದಲ್ಲೇ ಅವ್ಯವಸ್ಥೆ ಕಂಡುಬಂತು. ಆ ದ್ವಾರದ ಮೂಲಕ ದೇಗಲ ಪ್ರವೇಶಿಸಲು ಜಿಲ್ಲಾಧಿಕಾರಿ ಆಗಮಿಸಿದ ವೇಳೆ ಗೇಟ್ ನ ಕೀ ಇಟ್ಟುಕೊಂಡಿದ್ದ ವ್ಯಕ್ತಿ ನಾಪತ್ತೆ‌ಯಾಗಿದ್ದ.ಪರಿಣಾಮ ಕೆಲ ಸಮಯ ದೇಗುಲದ ಹೊರಭಾಗದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಹಾಗೂ ದಂಪತಿ, ಇತರ ಹಿರಿಯ ಅಧಿಕಾರಿಗಳು ಕಾದು ನಿಂತರು. ಕೀ ಇಟ್ಟುಕೊಂಡಿದ್ದ ವ್ಯಕ್ತಿ ಬಂದು ಬೀಗ ತೆಗೆದ ಬಳಿಕ ದೇಗುಲಕ್ಕೆ ಭೇಟಿ ನೀಡಿದರು.ಜನರ ನೂಕುನುಗ್ಗಲಿನ ನಡುವೆ ಸಾಗಿದ ಜಿಲ್ಲಾಧಿಕಾರಿಗಳು ದೇಗುಲದ ಒಳಭಾಗದಲ್ಲಿ ಉಂಟಾಗಿದ್ದ ಭಾರೀ ಜನಜಂಗುಳಿ ಹಾಗು ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.ಈ ಬಗ್ಗೆ ಚಾಮುಂಡೇಶ್ವರಿ ದೇವಾಲಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪಾ ಅವರ ಜೊತೆ ಮಾತನಾಡಿ ಜನಜಂಗುಳಿ ತಪ್ಪಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.ಬ್ಯಾರಿಕೇಡ್ ಗೆ ಸಿಲುಕಿದ ಗೂಳಿ ಪರದಾಟಜನರು ಸರದಿ ಸಾಲಿನಲ್ಲಿ ಸಾಗಲು ಅಳವಡಿಸಿದ್ದ ಬ್ಯಾರಿಕೇಡ್ ನಲ್ಲಿ ಗೂಳಿ ಸಿಲುಕಿ ಪರದಾಡಿತು. ಮುಂದೆ ಸಾಗಲಾಗದೇ ಪರಿತಪಿಸಿದ ಗೂಳಿಯು ಕೊಂಬಿನಿಂದ ಬ್ಯಾರಿಕೇಡ್ ಸರಿಸಲು ಯತ್ನಿಸಿತು. ಆದರೆ ಬ್ಯಾರಿಕೇಡ್ ಸರಿಸಲಾಗದೇ ದಿಕ್ಕುತೋಚದಂತಾದ ಗೂಳಿಯು ಪರದಾಡಿತು. ಈ ವೇಳೆ ಪೊಲೀಸರು ಬಂದು ಬ್ಯಾರಿಕೇಡ್‌ ಸರಿಸಿದ ಬಳಿಕ ಗೂಳಿ ಹೊರ ಬಂದಿತು.--- ಬಾಕ್ಸ್ 2-

-- 2000 ರೂ. ಟಿಕೆಟ್‌ ಗೆ ಬೇಡಿಕೆ--

ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮೊದಲ ಬಾರಿಗೆ ಜಾರಿಗೆ ತಂದಿರುವ 2000 ರೂ. ದರದ ಟಿಕೆಟ್‌ ಗೆ ಬಾರಿ ಬೇಡಿಕೆ ಉಂಟಾಯಿತು. ಟಿಕೆಟ್‌ ಜತೆ 500 ಎಂ.ಎಲ್‌ನೀರು, ಚಾಮುಂಡೇಶ್ವರಿ ವಿಗ್ರಹ, ಗಂಡುಬೇರುಂಡ, ಕುಂಕುಮ, ಲಾಡನ್ನು ಪ್ರಾಧಿಕಾರ ತೆರೆದಿದ್ದ ಮಳಿಗೆಯಲ್ಲಿ ವಿತರಿಸಲಾಯಿತು.ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಮುತ್ತೈದೆಯರಿಗೆ ಪ್ರಾಧಿಕಾರದಿಂದ ಉಚಿತವಾಗಿ ಮಡಿಲಕ್ಕಿ ವಿತರಿಸಿದರು. ಇದರಲ್ಲಿ ರವಿಕೆ, ಬಾಗಿನದ ವಸ್ತುಗಳು, ಬೆಲ್ಲ, ಅಕ್ಕಿಯನ್ನು ಒಳಗೊಂಡ ಒಂದು ಪೊಟ್ಟಣವನ್ನು ನೀಡಿದರು.--- ಬಾಕ್ಸ್ 3--

-- ದೇವರ ದರ್ಶನಕ್ಕೆ ಹರಸಾಹಸ--ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರು ಹರಸಾಹಸ ಪಟ್ಟರು. ದೇಗುಲದ ಗರ್ಭ ಗುಡಿ ಬಳಿ ಭಾರೀ ಜನಜಂಗುಳಿ ನಿರ್ಮಾಣವಾಯಿತು. ಮೆಟ್ಟಿಲು ಮಾರ್ಗದ ಮೂಲಕ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದಾಗ ಒತ್ತಡ ಉಂಟಾಯಿತು. ಧರ್ಮ ದರ್ಶನ ಪಡೆಯಲು ಸಹ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದರು. 300 ರೂ. ಮತ್ತು 2000 ರೂ. ಟಿಕೆಟ್‌ಪಡೆದು ಗರ್ಭಗುಡಿ ಪ್ರವೇಶಿಸುವಾಗ ಎಲ್ಲಾ ಭಕ್ತರು ಒಂದೆಡೆ ಸೇರಿದ್ದರಿಂದ ಭಾರೀ ನೂಕುನುಗ್ಗಲು ಉಂಟಾಯಿತು.ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ವ್ಯವಸ್ಥೆಯ ವಿರುದ್ಧ ಭಕ್ತರು ಕಿಡಿಕಾರಿದರು. ಹಿಂದೆಂದೂ ಈ ರೀತಿಯ ಅವ್ಯವಸ್ಥೆ ಆಗಿರಲಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ