ತುಮಕೂರು ಶಾಸಕರ ವಿರುದ್ಧ ಮರೂರಿನಲ್ಲಿ ಪ್ರತಿಭಟನೆ

KannadaprabhaNewsNetwork | Published : May 25, 2024 12:49 AM

ಸಾರಾಂಶ

ಕುದೂರು: ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ತುಮಕೂರು ಜಿಲ್ಲೆಯ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಮರೂರು ಹ್ಯಾಂಡ್ ಪೋಸ್ಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹೆದ್ದಾರಿಯಲ್ಲಿ ಪ್ರತಿಭಿಸಲು ಮುಂದಾದ ತಾಲೂಕಿನ ರೈತಸಂಘ, ಹಾಗೂ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಪಕ್ಷದ ನಾಯಕರೊಂದಿಗೆ ಪೊಲೀಸರು ಮಾತಿನ ಚಕಮಕಿ ನಡೆಸಿದ ಘಟನೆ ಜರುಗಿತು.

ಕುದೂರು: ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ತುಮಕೂರು ಜಿಲ್ಲೆಯ ಕೆಲವು ಶಾಸಕರು ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಮರೂರು ಹ್ಯಾಂಡ್ ಪೋಸ್ಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಹೆದ್ದಾರಿಯಲ್ಲಿ ಪ್ರತಿಭಿಸಲು ಮುಂದಾದ ತಾಲೂಕಿನ ರೈತಸಂಘ, ಹಾಗೂ ಕನ್ನಡಪರ ಸಂಘಟನೆಗಳು ಹಾಗೂ ವಿವಿಧ ಪಕ್ಷದ ನಾಯಕರೊಂದಿಗೆ ಪೊಲೀಸರು ಮಾತಿನ ಚಕಮಕಿ ನಡೆಸಿದ ಘಟನೆ ಜರುಗಿತು.

ಮರೂರು ಹ್ಯಾಂಡ್ ಪೋಸ್ಟ್ ನಲ್ಲಿ ಸೇರಿದ ಪ್ರತಿಭಟನಾಕಾರರು ಮಾಜಿ ಸಚಿವ ಎಚ್.ಎಂ.ರೇವಣ್ಣರವರ ನೇತೃತ್ವದಲ್ಲಿ ಹೆದ್ದಾರಿಯಲ್ಲಿ ವಾಹನ ತಡೆದು ಪ್ರತಿಭಟಿಸಲು ಮುಂದಾದರು. ಈ ವೇಳೆ ಡಿವೈಎಸ್ಪಿ ಎಂ.ಪ್ರವೀಣ್ ರವರು ತಡೆದು ರಸ್ತೆಯಲ್ಲಿ ಚಳವಳಿ ಮಾಡಲು ಅನುಮತಿ ಇಲ್ಲ. ಇದು ಕಾನೂನು ಬಾಹಿರವಾಗಿದೆ ಎಂದರು.

ಇದರಿಂದ ಕುಪಿತರಾದ ರೇವಣ್ಣರವರು ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಎಂದು ಹೆದ್ದಾರಿಯಲ್ಲಿ ಕೂರಲು ಮುಂದಾದಾಗ, ಪೋಲೀಸರು ಅವರನ್ನು ತಡೆದರು. ಸರ್ ಇದು ನಿಮ್ಮದೇ ಸರ್ಕಾರ, ನೀವೇ ಹೀಗೆ ಪ್ರತಿಭಟನೆ ಮಾಡಿದರೆ ಹೇಗೆ? ದಯವಿಟ್ಟು ಕಾನೂನನ್ನು ಗೌರವಿಸಿ. ರಸ್ತೆ ಬಂದ್ ಮಾಡಲು ಅವಕಾಶವಿಲ್ಲ. ಚುನಾವಣೆ ನೀತಿ ಸಂಹಿತೆ ಇನ್ನು ಮುಗಿದಿಲ್ಲ ಎಂದು ಹೇಳಿ ಪ್ರತಿಭಟನೆಕಾರರು ರಸ್ತೆಗೆ ಬರದಂದೆ ಪೊಲೀಸರು ವೃತ್ತಾಕಾರವಾಗಿ ಹಗ್ಗ ಹಿಡಿದು ರಸ್ತೆ ಬಂದ್ ಮಾಡಲು ಅವಕಾಶ ಕೊಡಲಿಲ್ಲ.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಎಂ.ರೇವಣ್ಣ ಮಾತನಾಡಿ, ಸರ್ಕಾರದಿಂದ ಈಗಾಗಲೇ ಯೋಜನೆ ಮಂಜೂರಾಗಿ ಹಣವೂ ಬಿಡುಗಡೆಯಾಗುತ್ತಿದೆ. ತಜ್ಞರ ಸಮಿತಿಯನ್ನು ಆಧರಿಸಿ ಕುಡಿಯುವ ನೀರನ್ನು ಮಾಗಡಿ ತಾಲೂಕಿನ 86 ಕೆರೆಗಳಿಗೆ ಹರಿಸಬೇಕು ಎಂದು ತೀರ್ಮಾನಿಸಿದ ನಂತರವೂ ತುಮಕೂರು ಜಿಲ್ಲೆಯ ನಾಯಕರು ಹೇಮಾವತಿ ನದಿ ನೀರು ಮಾಗಡಿ ತಾಲೂಕಿಗೆ ಕೊಡುವುದಿಲ್ಲ ಎಂದು ಪ್ರತಿಭಟನೆ ಮಾಡುತ್ತಿರುವುದು ಸರಿಯಲ್ಲ ಅಕ್ರೋಶ ವ್ಯಕ್ತಪಡಿಸಿದರು.

ನಮ್ಮ ಹೋರಾಟ ಸರ್ಕಾರದ ವಿರೋಧ ಅಲ್ಲ. ಮಾಗಡಿ ತಾಲೂಕಿಗೆ ನೀರು ಕೊಡವುದಿಲ್ಲ ಎಂದು ಪ್ರತಿಭಟನೆ ಮಾಡುತ್ತಿರುವ ತುಮಕೂರು ಜಿಲ್ಲೆಯ ನಾಯಕರುಗಳ ವಿರುದ್ಧವಾಗಿದೆ. 1993 ರಲ್ಲಿ ಚಾಲನೆಯಾದ ಶ್ರೀರಂಗ ಏತ ನೀರಾವರಿ ಯೋಜನೆಗೆ ಇದೇ ಸಿದ್ದರಾಮಯ್ಯರವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗಲೇ ಎರಡೂ ಜಿಲ್ಲೆಯವರು ನೀರನ್ನು ಹಂಚಿಕೊಳ್ಳಲೆಂದು ಹಣ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದರು. ಆದರೆ ನಂತರ ಬಂದ ಸರ್ಕಾರಗಳಿಂದ ಕೆಲಸ ಕುಂಠಿತವಾಯಿತು. ಏನೇ ಆದರೂ ತಾಲೂಕಿಗೆ ನೀರು ಹರಿಸದೆ ನಾವು ವಿರಮಿಸುವುದಿಲ್ಲ ಎಂದು ಹೇಳಿದರು.

ಕೆಂಪೇಗೌಡರ ತವರಿಗೇ ನೀರಿಲ್ಲ:

ಬೆಂಗಳೂರು ಹಾಗೂ ಸುತ್ತಮುತ್ತಲೂ ನೂರಾರು ಕೆರೆ ಕಟ್ಟಿ ನೀರಾವರಿಗೆ ಅನುಕೂಲ ಮಾಡಿಕೊಟ್ಟ ಮಾಗಡಿ ಕೆಂಪೇಗೌಡರ ತವರಿನ ಕೆರೆಗಳಿಗೆ ಇಂದು ನೀರು ಕೊಡುವುದು ಬೇಡ ಎಂದರೆ ಹೇಗೆ? ಸಿದ್ದಗಂಗಾ ಶ್ರೀಗಳ ಜನ್ಮಸ್ಥಳಕ್ಕೆ ನೀರು ಬೇಡ ಎಂದರೆ ಹೇಗೆ? ಬಾಲಗಂಗಾಧರನಾಥಸ್ವಾಮೀಜಿಯವರ ಕ್ಷೇತ್ರಕ್ಕೆ ನೀರು ಬೇಡ ಎಂದರೆ ಹೇಗೆ? ಸಾಲುಮರದ ತಿಮ್ಮಕ್ಕನ ಊರಿಗೆ ನೀರು ಕೊಡುವುದಿಲ್ಲ ಎಂದರೆ ಅದು ನ್ಯಾಯವಾದ ಹೋರಾಟವಾಗುತ್ದೆಯಾ? ಎಂದು ಪ್ರಶ್ನೆ ಮಾಡಿದರು.

ತಾಪಂ ಮಾಜಿ ಅಧ್ಯಕ್ಷ ಟಿ.ಜಿ.ವೆಂಕಟೇಶ್ ಮಾತನಾಡಿ, ಮಾಗಡಿ ತಾಲೂಕಿನ ಪಕ್ಕದ ಕ್ಷೇತ್ರವಾದ ಕುಣಿಗಲ್ ಕೆರೆಯಿಂದ ನಮ್ಮ ತಾಲೂಕಿಗೆ ನೀರು ಬರಬೇಕಾಗಿದೆ. ಆದರೆ ಈಗ ಬರುತ್ತಿರುವ ಪೈಪ್ ಯೋಜನೆಯಿಂದ ಕುಣಿಗಲ್ ಕೆರೆಗೆ ನೀರು ಸರಿಯಾಗಿ ಬರುತ್ತಿಲ್ಲ. ಇನ್ನು ನಮ್ಮ ತಾಲೂಕಿಗೆ ಬರುವುದು ತಡವಾಗುತ್ತದೆ. ಅದಕ್ಕಾಗಿಯೇ ಎಕ್ಸ್ ಪ್ರೆಸ್ ಕೆನಾಲ್ ಮೂಲಕ ಹರಿದರೆ ಮಾತ್ರ ಎಲ್ಲರಿಗೂ ಸಮರ್ಪಕವಾಗಿ ನೀರು ಸಿಗುತ್ತದೆ. ಇಲ್ಲದೇ ಹೋದರೆ ತಾಲೂಕಿಗೆ ಬೇಗನೆ ನೀರು ಬರಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು

ಈಗಾಗಲೇ 160 ಕೋಟಿ ಖರ್ಚು:

ತುಮಕೂರು ಜಿಲ್ಲೆಯ ನಾಯಕರು ಏನೇ ಪ್ರತಿಭಟನೆ ಮಾಡಿದರು ಈಗಾಗಲೇ 160 ಕೋಟಿ ರೂ ಕಾಮಗಾರಿಗೆ ಹಣ ಖರ್ಚಾಗಿದೆ. ಕಾಮಗಾರಿ ನಡೆಯುತ್ತಿದೆ. ಕುದೂರು ಹೋಬಳಿಯ ನಾರಸಂದ್ರ ಕೆರೆಗೆ ಮೊದಲು ನೀರು ಹರಿದು ಬರುತ್ತದೆ. ಅಲ್ಲಿಂದ ಮುಂದಿನ ಕೆರೆಗಳಿಗೆ ಯೋಜನೆ ರೂಪಿಸಲಾಗಿದೆ ಎಂದು ವೆಂಕಟೇಶ್ ಅಂಕಿ ಅಂಶಗಳ ಸಹಿತ ವಿವರಿಸಿದರು.

ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡದೆ ಏನೂ ದೊರಕುವುದಿಲ್ಲ. ನಾವೂ ಕೂಡಾ ತಾಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಭರ್ತಿ ಮಾಡಿಸದೆ ವಿರಮಿಸುವುದಿಲ್ಲ. ಮಾಗಡಿಗೆ ನೀರು ಬರಬಾರದೆಂದು ಪ್ರತಿಭಟನೆ ಮಾಡುತ್ತಿರುವ ನಾಯಕರುಗಳು ಇದನ್ನು ಮನಗಾಣಬೇಕು ಎಂದು ಎಚ್ಚರಿಸಿದರು.

ತಾಪಂ ಮಾಜಿ ಸದಸ್ಯ ಮಾಡಬಾಳ್ ಜಯರಾಂ ಮಾತನಾಡಿ, ಕುಡಿಯುವ ನೀರಿಗೆ ಯಾರೂ ಅಡ್ಡಿಯುಂಟು ಮಾಡಬಾರದು. ನಿಮ್ಮ ಜಿಲ್ಲೆಯ ಕೆರೆಗಳಿಗೆ ಸಾಕಷ್ಟು ನೀರು ಬಂದಿದ್ದರೂ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕಪಡಿಸಿದರು.

ಮಾಗಡಿ ತಾಲೂಕಿನ ಕೆರೆಗಳಿಗೆ ಅದಷ್ಟು ಬೇಗ ಹೇಮಾವತಿ ಹರಿಯುವಂತಾಗಬೇಕು, ಎಂದು ಮಾಗಡಿ ತಹಸೀಲ್ದಾರ್ ಶರತ್‌ಕುಮಾರ್ ಅವರಿಗೆ ಪ್ರತಿಭಟನೆಕಾರರು ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ಪ್ರಸಾದ್ ಗೌಡ, ಬಸವರಾಜೇಗೌಡ, ಮರೂರು ವೆಂಕಟೇಶ್, ಕುದೂರು ಬಿಜೆಪಿ ಅಧ್ಯಕ್ಷ ನಾಗರಾಜ್, ಶೇಷಪ್ಪ, ಪದ್ಮನಾಭ್, ಮಹಿಳಾ ಹೋರಾಟಗಾರ್ತಿ ಪಂಕಜ, ಶೈಲಜ, ಸಾಗರ್ ಗೌಡ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್‌...........

ಡಿ.ಕೆ.ಶಿವಕುಮಾರ್‌ ಮೌನ ಏಕೆ?ಬಿಜೆಪಿ ಪಕ್ಷದ ಮುಖಂಡ ಬಸವರಾಜ್ ಮಾತನಾಡಿ, ರಾಮನಗರ ಜಿಲ್ಲೆಯವರೇ ಅದ ಡಿ.ಕೆ.ಶಿವಕುಮಾರ್ ಅವರು ತುಮಕೂರಿನ ನಾಯಕರಿಗೆ ಪ್ರತಿಭಟನೆ ಮಾಡಬೇಡಿ. ಮಾಗಡಿ ತಾಲೂಕಿಗೂ ನೀರು ಕೊಡಬೇಕಾಗಿದೆ. ಇದು ನಿಯಮವೂ ಹೌದು ಮತ್ತು ಮಾತನವೀಯತೆಯೂ ಹೌದು ಎಂದು ತಿಳಿಹೇಳುವ ಕೆಲಸ ಏಕೆ ಮಾಡುತ್ತಿಲ್ಲ? ಗೃಹಮಂತ್ರಿಯವರ ಮನೆದೇವರು ಇರುವ ಊರು ಮಾಗಡಿ ತಾಲೂಕಿನ ಮುಳ್ಳಕಟ್ಟಮ್ಮ ಆಗಿದೆ. ಆದರೆ ಗೃಹಮಂತ್ರಿಯೂ ಕೂಡಾ ಪ್ರತಿಭಟನಕಾರರಿಗೆ ಸುಮ್ಮನಿರುವಂತೆ ಹೇಳುತ್ತಿಲ್ಲ ಏಕೆ? ಈ ಮೌನದ ಹಿಂದೆ ಬೇರೆ ಏನಾದರೂ ಅರ್ಥ ಇದೆಯಾ ಎಂದು ಪ್ರಶ್ನಿಸಿದರು.

ಬಾಕ್ಸ್ .....................

ಪ್ರತಿಭಟನೆಕಾರರಿಗಿಂತ ಪೋಲೀಸರ ಸಂಖ್ಯೆಯೇ ಹೆಚ್ಚು

ಸಂಘಟನೆಯ ವಿಷಯದಲ್ಲಿ ಒಮ್ಮತವಿಲ್ಲದ ಕಾರಣ ಪ್ರತಿಭಟನೆಗೆ ರೈತರು, ಸಂಘಸಂಸ್ಥೆಯ ಮುಖಂಡರು ಭಾಗವಹಿಸಿರಲಿಲ್ಲ. ಆದರೆ ಪೋಲೀಸಿನವರ ಸಂಖ್ಯೆಯೇ ಹೆಚ್ಚಾಗಿತ್ತು. ರಸ್ತೆ ಪ್ರತಿಭಟನೆ ಮಾಡಲು ತಡೆದಾಗ ಮಾಜಿ ಸಚಿವ ಎಚ್.ಎಂ.ರೇವಣ್ಣ ಪ್ರತಿಭಟನೆ ಮಾಡುವವರಿಗಿಂತ ಪೋಲೀಸಿನವರೇ ಹೆಚ್ಚಾಗಿದ್ದಾರೆ. ಹೀಗಾಗಿ ಅವರು ನಮ್ಮನ್ನು ಬಲವಾಗಿ ತಡೆಯುತ್ತಿದ್ದಾರೆ. ಇಷ್ಟು ಕಡಿಮೆ ಜನ ಸೇರುತ್ತಾರೆ ಎಂದಿದ್ದರೆ ನಾನೇ ಜನರನ್ನು ಸೇರಿಸುತ್ತಿದ್ದೆ. ನೀರು ಹರಿಯವ 86 ಕೆರೆಗಳ ಊರಿನ ಜನರು ಬಂದಿದ್ದರೂ ಹೋರಾಟ ಇನ್ನಷ್ಟು ತೀವ್ರವಾಗುತ್ತಿತ್ತು ಎಂಬ ಮಾತುಗಳು ಕೇಳಿ ಬಂದವು.

ಬಾಕ್ಸ್ ................

ಶಾಸಕರ ಅನುಪಸ್ಥಿತಿ

ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್ ಪ್ರತಿಭಟನೆಯಲ್ಲಿ ಭಾಗವಹಿಸದೇ ಇರುವುದು ಜನರಲ್ಲಿ ಬೇಸರ ಉಂಟು ಮಾಡಿತು. ಇಂತಹ ಸಂಕಷ್ಟದ ಸಂದರ್ಭದಲ್ಲಾದರೂ ಕ್ಷೇತ್ರದ ಎಲ್ಲಾ ಪಕ್ಷದ ಮುಖಂಡರುಗಳು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಜನರು ಮನವಿಯನ್ನು ಮಾಡಿದರು.

24ಕೆಆರ್ ಎಂಎನ್ 1,2,3.ಜೆಪಿಜಿ

1.ಹೇಮಾವತಿ ನದಿ ನೀರು ಮಾಗಡಿ ತಾಲೂಕಿನ ಕೆರೆಗಳಿಗೆ ಹರಿಯಬೇಕು ಎಂದು ಹೆದ್ದಾರಿಯಲ್ಲಿ ರೈತ ಸಂಘಟನಗಳು ಹಾಗೂ ಇತರೆ ಸಂಘಟನೆಗಳು ಮರೂರು ಹ್ಯಾಂಡ್ ಪೋಸ್ಟ್ ನಲ್ಲಿ ಪ್ರತಿಭಟನೆ ಮಾಡಿದರು.2.

ಮಾಜಿ ಸಚಿವ ಎಚ್.ಎಂ.ರೇವಣ್ಣರವರಿಗೆ ಡಿವೈಎಸ್ಪಿ ಪ್ರವೀಣ್ ಅವರೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು3.

ಪ್ರತಿಭಟನೆಕಾರರು ಹೆದ್ದಾರಿಗೆ ಬರದಂತೆ ಪೋಲೀಸರು ಹಗ್ಗ ಹಿಡಿದು ಪ್ರತಿಭಟನೆಕಾರನ್ನು ತಡೆದಿರುವುದು.

Share this article