ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪ: ಪ್ರತಿಭಟನೆ

KannadaprabhaNewsNetwork |  
Published : Nov 08, 2025, 02:45 AM IST
ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವು ಆರೋಪಿಸಿ ಪ್ರತಿಭಟನೆ | Kannada Prabha

ಸಾರಾಂಶ

ಸುಂಟಿಕೊಪ್ಪ ಖಾಸಗಿ ಕ್ಲಿನಿಕ್‌ ವೈದ್ಯರ ನಿರ್ಲಕ್ಷ್ಯದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರು ಶುಕ್ರವಾರ ಮಧ್ಯಾಹ್ನ ಕ್ಲಿನಿಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಸುಂಟಿಕೊಪ್ಪ: ಇಲ್ಲಿನ ಖಾಸಗಿ ಕ್ಲಿನಿಕ್‌ ವೈದ್ಯರ ನಿರ್ಲಕ್ಷ್ಯದಿಂದ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಮೃತನ ಕುಟುಂಬಸ್ಥರು ಮತ್ತು ಸಾರ್ವಜನಿಕರು ಶುಕ್ರವಾರ ಮಧ್ಯಾಹ್ನ ಕ್ಲಿನಿಕ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಮೃತ ಯುವಕನ ಮರಣೋತ್ತರ ಪರೀಕ್ಷೆಯ ಬಳಿಕ ಆಂಬುಲೆನ್ಸ್‌ ವಾಹನದಲ್ಲಿ ಸುಂಟಿಕೊಪ್ಪಕ್ಕೆ ತಂದು, ಕ್ಲಿನಿಕ್ ಮುಂಭಾಗ ನಿಲ್ಲಿಸಿ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್‌ ಠಾಣಾಧಿಕಾರಿ ಮೋಹನ್‌ರಾಜ್ ಮತ್ತು ಸಿಬ್ಬಂದಿ, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಇಂದೂದರ್, ಆರ್‌ಸಿಎಚ್ ಡಾ.ಮಧುಸೂದನ್, ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮೆಹರೊಜ್ ಸ್ಥಳಕ್ಕೆ ಆಗಮಿಸಿದರು.

ಕ್ಲಿನಿಕ್‌ಗೆ ಬೀಗ, ವೈದ್ಯರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು. ಶವ ಪರೀಕ್ಷೆಯ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಾಲಾಗುವುದೆಂದು ಡಾ.ಇಂದೂದರ್ ಮಾಹಿತಿ ನೀಡಿದರು.ಘಟನೆ ವಿವರ:ಸುಂಟಿಕೊಪ್ಪ ನಿವಾಸಿ ಸ್ವಾಮಿ ಮತ್ತು ಸುಂದರಿ ದಂಪತಿಯ ಪುತ್ರ ವಿನೋದ್ (೩೪), ಗುರುವಾರ ತೀವ್ರ ಸೊಂಟ ನೋವು, ಕೈನೋವಿನ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಕನ್ನಡ ವೃತ್ತದ ಬಳಿಯಿರುವ ಖಾಸಗಿ ಕ್ಲಿನಿಕ್‌ಗೆ ಬಂದಿದ್ದಾರೆ. ವೈದ್ಯರು ಪರೀಕ್ಷಿಸಿ ೨ ಚುಚ್ಚುಮದ್ದುಗಳನ್ನು ನೀಡಿದ್ದು, ಕೆಲವು ಮಾತ್ರೆಗಳನ್ನು ನೀಡಿ ಮನೆಗೆ ಹೋಗಿ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು.

ಅದರಂತೆ ವಿನೋದ್ ಮನೆಗೆ ಬಂದಿದ್ದು, ವಿಪರೀತ ಆಯಾಸಗೊಂಡ ಹಿನ್ನೆಲೆಯಲ್ಲಿ ಕುಂಟುಂಬಸ್ಥರು ಮಡಿಕೇರಿ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ ಆಸ್ಪತ್ರೆಯಲ್ಲಿ ವೈದ್ಯರು ವಿನೋದ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಪ್ರತಿಭಟನೆ ಆರಂಭದಲ್ಲೇ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್, ಉಪಾಧ್ಯಕ್ಷೆ ಶಿವಮ್ಮ ಮಹೇಶ್ ಹಾಗೂ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಪ್ರತಿಭಟನಕಾರರನ್ನು ಸಾಂತ್ವನಗೊಳಿಸಲು ಸಾಕಷ್ಟು ಪ್ರಯತ್ನ ಹಾಗೂ ಮನವೊಲಿಸುವ ಕಾರ್ಯವನ್ನು ನಡೆಸಿದ್ದರೂ ಪ್ರಯೋಜನವಾಗಲಿಲ್ಲ.

ಸ್ಥಳಕ್ಕೆ ಧಾವಿಸಿದ ಕುಶಾಲನಗರ ವೃತ್ತನಿರೀಕ್ಷಕ ದಿನೇಶ್ ಪ್ರತಿಭಟನಕಾರರ ಮನ ಒಲಿಸಲು ಪ್ರಯತ್ನಿಸಿದರೂ ಪ್ರತಿಭಟನಕಾರರು ಹಿಂದೆಸರಿಯಲಿಲ್ಲ. ಕುಶಾಲನಗರ ನಗರ, ಮಡಿಕೇರಿ ಗ್ರಾಮಾಂತರ ಹಾಗೂ ಸಂಚಾರಿ ಪೊಲೀಸರನ್ನು ನಿಯೋಜಿಸುವ ಮೂಲಕ ಸೂಕ್ತ ಬಂದೋಬಸ್ತ್ ವಹಿಸಲಾಯಿತು.

ಅಂತಿಮವಾಗಿ ಪೊಲೀಸ್ ಮತ್ತು ಗ್ರಾಮ ಪಂಚಾಯಿತಿ ಮಧ್ಯಸ್ಥಿಕೆಯಲ್ಲಿ ವಿನೋದ್ ಅವರ ಪಾರ್ಥಿವ ಶರೀರಿರದ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಒಪ್ಪಿಗೆ ನೀಡಿದರು. ಜೊತೆಗೆ ನ.೧೩ರಂದು ಪೊಲೀಸ್‌ ಠಾಣೆಯಲ್ಲಿ ಆರೋಪಿತ ವೈದ್ಯರ ಸಮ್ಮುಖದಲ್ಲಿ ಕುಟುಂಬಸ್ಥರೊಂದಿಗೆ ಸಭೆ ನಡೆಸುವ ಲಿಖಿತ ಒಪ್ಪಂದದೊಂದಿಗೆ ಪ್ರತಿಭಟನೆ ಕೈಬಿಡಲಾಯಿತು. ಮೃತ ದೇಹದ ಅಂತ್ಯಕ್ರಿಯೆಯನ್ನು ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಸಂಜೆ ನೇರವೆರಿತು.

PREV

Recommended Stories

83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್‌!