ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸಿ

KannadaprabhaNewsNetwork | Published : Jul 26, 2024 1:34 AM

ಸಾರಾಂಶ

ಶಿಕ್ಷಕರಿಗೆ ಕಾಲಮಿತಿ ಬಡ್ತಿ, ಪ್ರೌಢಶಾಲಾ ಶಿಕ್ಷಕರ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿಗಳಲ್ಲಿ ಅನ್ಯಾಯವಾಗುತ್ತಿದ್ದು, ವರ್ಗಾವಣೆಯಲ್ಲೂ ತೊಂದರೆಯಾಗುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ವರ್ಗಾವಣೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಹಿತರಕ್ಷಣಾ ವೇದಿಕೆಯವರು ಮೈಸೂರಿನ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ (ಡಿಡಿಪಿಐ) ಮುಂಭಾಗದಲ್ಲಿ ಗುರುವಾರ ಪ್ರತಿಭಟಿಸಿದರು.

2016 ಮುಂಚೆ ಪ್ರಾಥಮಿಕ ಶಾಲಾ ಶಿಕ್ಷಕರೆಂದು ನೇಮಕವಾಗಿ 25- 30 ವರ್ಷಗಳಿಂದ 1- 8ನೇ ತರಗತಿಗೆ ಬೋಧಿಸುತ್ತಿರುವ ಶಿಕ್ಷಕರನ್ನು ಹೊಸ ವೃಂದಬಲ ನಿಗದಿ, 2017ರಲ್ಲಿ ರಚಿತವಾದ ನೂತನ ಸಿಎಸ್‌ಆರ್ ಪೂರ್ವಾನ್ವಯ ಮಾಡಿ 1- 5ನೇ ತರಗತಿಗೆ ಸೀಮಿತಗೊಳಿಸಿ ಹಿಂಬಡ್ತಿ ನೀಡಿರುವುದು ಸಾಮಾಜಿಕ ನ್ಯಾಯಕ್ಕೆ ವ್ಯತಿರಿಕ್ತವಾಗಿದೆ. ಇದರಿಂದ ಶಿಕ್ಷಕರಿಗೆ ಕಾಲಮಿತಿ ಬಡ್ತಿ, ಪ್ರೌಢಶಾಲಾ ಶಿಕ್ಷಕರ ಬಡ್ತಿ, ಮುಖ್ಯ ಶಿಕ್ಷಕರ ಬಡ್ತಿಗಳಲ್ಲಿ ಅನ್ಯಾಯವಾಗುತ್ತಿದ್ದು, ವರ್ಗಾವಣೆಯಲ್ಲೂ ತೊಂದರೆಯಾಗುತ್ತಿದೆ ಎಂದು ಅವರು ಕಿಡಿಕಾರಿದರು.

25- 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ವರ್ಗಾವಣೆಗೆ ಕಾಯುತ್ತಿದ್ದಾರೆ. ಆದರೆ, ಕೌನ್ಸೆಲಿಂಗ್‌ ಗೆ ಬರುವ ಶಿಕ್ಷಕರಿಗೆ ವರ್ಗಾವಣೆ ಸಿಗುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರು 6, 7, 8ನೇ ತರಗತಿಗಳಿಗೆ ಪಾಠ ಮಾಡಬೇಕು. ಆದರೆ, ಜಿಪಿಟಿ ಹುದ್ದೆಗಳಿಗೆ ಸ್ಥಳ ಆಯ್ಕೆ ಮಾಡಿಕೊಳ್ಳುವಂತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರು ಅದೇ ಹುದ್ದೆಯ ಸ್ಥಳಕ್ಕೆ ಮಾತ್ರ ಆಯ್ಕೆಗೆ ಅವಕಾಶವಿದೆ. ಬೇರೆ ಶಾಲೆಗೆ ಸ್ಥಳ ಆಯ್ಕೆ ಮಾಡಿಕೊಂಡರೆ ಅವರ ಮೊದಲಿನ ಹುದ್ದೆ ಬದಲಾಗುತ್ತದೆ. ಇದರಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ ಎಂದು ಅವರು ದೂರಿದರು.

25- 30 ವರ್ಷ ಸೇವೆ ಸಲ್ಲಿಸಿ ದೂರದ ಹಳ್ಳಿಗಾಡಿನಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಸ್ಥಳವಿಲ್ಲ. ಅವರಿಗೆ ನೆಮ್ಮದಿಯ ಬದುಕು ಬೇಡವೆ? ಜಿಪಿಟಿ ಶಿಕ್ಷಕರು ಕೆಲವೇ ವರ್ಷ ಸೇವೆ ಸಲ್ಲಿಸಿದ್ದರೂ ಮನೆಯಿಂದ ಕೂಗಳತೆ ದೂರದ ಶಾಲೆಗೆ ವರ್ಗಾವಣೆ ಸಿಗುತ್ತಿದೆ. ಇದು ಅವೈಜ್ಞಾನಿಕವಲ್ಲವೆ ಎಂದು ಅವರು ಪ್ರಶ್ನಿಸಿದರು.

ಅರ್ಹ ಶಿಕ್ಷಕರನ್ನು ಸೇವಾ ಜೇಷ್ಠತೆಯೊಂದಿಗೆ ಜಿಪಿಟಿ ಶಿಕ್ಷಕರೆಂದು ಪದನಾಮಕರಣ ಮಾಡಿದರೆ ಖಾಲಿ ಉಳಿದ ಎಲ್ಲಾ ಜಿಪಿಟಿ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಜೊತೆಗೆ ಜಿಪಿಟಿ ವೃಂದಬಲ ಹೆಚ್ಚಾಗಿ ತಮ್ಮ ತಮ್ಮ ಸ್ಥಳಗಳನ್ನು ಅದಲು ಬದಲು ಮಾಡಿಕೊಳ್ಳಬಹುದು. ಬಹುತೇಕ ಹುದ್ದೆಗಳು ಏಕ ಕಾಲದಲ್ಲಿ ಖಾಲಿಯಾಗಿ ವರ್ಗಾವಣೆ ಸಿಗುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.

ವೇದಿಕೆಯ ಸಂಚಾಲಕ ಪಿ.ಎಸ್. ಮಂಜುನಾಥ್, ಉಮಾ ಗುಡ್ಡದ, ಶಂಕರ್ ಜೇನಿ, ನೇತ್ರಾವತಿ, ಗೀತಾ, ನಾಗರತ್ನಾ, ರಮೇಶ್, ಎಂ. ಲೋಕೇಶ್, ಮಹೇಶ್, ಪ್ರವೀಣ್, ಉಷಾ, ವಿ. ಪವಿತ್ರಾ, ಶೋಭಾ ಮೊದಲಾದವರು ಇದ್ದರು.

Share this article