ಕನ್ನಡಪ್ರಭ ವಾರ್ತೆ ಹಾಸನ
ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರದ ಪ್ರೋತ್ಸಾಹಧನ ಮತ್ತು ರಾಜ್ಯ ಸರ್ಕಾರದ ನಿಶ್ಚಿತ ಮಾಸಿಕ ಗೌರವಧನ ಹಾಗೂ ಪ್ರಣಾಳಿಕೆಯ ಭರವಸೆಯ ಮೊತ್ತ ಒಟ್ಟುಗೂಡಿಸಿ ರು. ೧೫,೦೦೦ ಮಾಸಿಕ ನಿಶ್ಚಿತ ಗೌರವಧನ ನೀಡಬೇಕು ಎನ್ನುವ ಬಹುದಿನಗಳ ಬೇಡಿಕೆಯೂ ಸೇರಿದಂತೆ ನಮ್ಮ ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದಿಂದ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ, ಜಿಪಂ ಸಿಇಒ ಬಿ.ಆರ್. ಪೂರ್ಣಿಮಾ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಶಿವಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು. ಇದೇ ವೇಳೆ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಜಿ. ಹನುಮೇಶ್ ಮಾತನಾಡಿ, ರಾಜ್ಯದ ಆಶಾ ಕಾರ್ಯಕರ್ತೆಯರಾದ ನಾವು ಹಗಲಿರುಳು ಬಡಜನರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಿ ಕೊಡಲು ಆರೋಗ್ಯ ಇಲಾಖೆಯಲ್ಲಿ ಪರಿಶ್ರಮಿಸುತ್ತಿರುವುದು ನಿಮಗೆ ತಿಳಿದಿದೆ. ನಮ್ಮಂತೆಯೇ ರಾಜ್ಯದಲ್ಲಿ ಸರಿಸುಮಾರು ೪೨,೦೦೦ ಆಶಾ ಕಾರ್ಯಕರ್ತೆಯರು ಮಹತ್ತರವಾದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹಳ್ಳಿ ಮತ್ತು ನಗರದ ಬೇರುಮಟ್ಟದಲ್ಲಿ ಕೆಲಸ ನಿರ್ವಹಿಸಿ ಸಮಗ್ರ ಅಭಿವೃದ್ಧಿಯ ಕುರಿತು ಸಮಾಜದ ಆರೋಗ್ಯಕರ ಬದಲಾವಣೆಗೆ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಹಾಗೆಯೇ ಕೋವಿಡ್-೧೯ ಸಂದರ್ಭದಲ್ಲಿ ಈ ಫ್ರಂಟ್ ಲೈನ್ ವಾರಿಯರ್ಸ್ ಆಗಿ ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸಿರುವುದನ್ನು ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಡಿದು ಎಲ್ಲರೂ ಶ್ಲಾಘಿಸಿದ್ದಾರೆ ಎಂದರು.
ಈ ಅಸಹಾಯಕ ಬಡ ಮಹಿಳೆಯರು, ವಿಧವೆಯರು, ವಿಚ್ಛೇದಿತರನ್ನು ಆಶಾಗಳನ್ನಾಗಿ ನೇಮಕ ಮಾಡಿಕೊಂಡು ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲಾಗುತ್ತದೆ ಎಂಬುದು ಸರ್ಕಾರದ ಘೋಷಣೆ. ಆದರೆ ಆಶಾಗಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕುತ್ತಿಲ್ಲವೆಂಬುದು ವಾಸ್ತವ. ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು "ಆಶಾನಿಧಿ " ಪೋರ್ಟಲ್‌ನಲ್ಲಿ ಆನ್ಸೆನ್ ದಾಖಲು ಮಾಡಬೇಕಿದ್ದು, ಆಶಾಗಳು ಮಾಡಿದ ಕೆಲಸಗಳು ದಾಖಲಾಗದೇ ಕಳೆದ ೮ ವರ್ಷಗಳಿಂದ ಮಾಡಿದ ಕೆಲಸಕ್ಕೆ ಪ್ರೋತ್ಸಾಹಧನ ಸಿಗುತ್ತಿಲ್ಲ. ಹಲವಾರು ಸಮಸ್ಯೆಯಿಂದ ಆಶಾ ಕಾರ್ಯಕರ್ತೆಯರಿಗೆ ಬಹುದೊಡ್ಡ ಪ್ರಮಾಣದ ಅನ್ಯಾಯ ಆಗುತ್ತಿದೆ. ಸಮಸ್ಯೆಗಳ ಕುರಿತು ಆರೋಗ್ಯ ಇಲಾಖೆ ಮತ್ತು ಸರ್ಕಾರಕ್ಕೆ ಕಳೆದ ೮ ವರ್ಷಗಳಿಂದ ಲೆಕ್ಕವಿಲ್ಲದಷ್ಟು ದೂರುಗಳನ್ನು ಸಲ್ಲಿಸಲಾಗಿದೆ. ಲೆಕ್ಕವಿಲ್ಲದಷ್ಟು ಸಭೆಗಳು, ಚರ್ಚೆಗಳು, ನಡೆದಿವೆ. ಇಲಾಖೆಯಿಂದ ಮತ್ತು ಸರ್ಕಾರದಿಂದ ಕೈಗೊಂಡ ಯಾವುದೇ ಕ್ರಮದಿಂದ ಸಮಸ್ಯೆ ಪರಿಹಾರವಾಗದೇ ಹಾಗೆಯೇ ಉಳಿದಿವೆ. ಅದರಿಂದಾಗಿ ಪ್ರತಿಯೊಬ್ಬ ಆಶಾ ಸಾವಿರಾರು ರುಪಾಯಿ ಆರ್ಥಿಕ ನಷ್ಟ ಅನುಭವಿಸಿರುವರು ಎಂದು ದೂರಿದರು.ಈ ಸಮಸ್ಯೆಯನ್ನು ಪರಿಹರಿಸಲು ರಾಜ್ಯ ಸರ್ಕಾರ ಈಗ ನೀಡುತ್ತಿರುವ ರು.೫೦೦೦ ಮಾಸಿಕ ನಿಶ್ಚಿತ ಗೌರವಧನ ಮತ್ತು ವಿವಿಧ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ರು.೭೦೦೦ (ಪ್ರೋತ್ಸಾಹಧನ ಆಶಾ ಸಾಫ್ಟ್ ಆನ್‌ಲೈನ್ ಸಮಸ್ಯೆಯಿಂದ ಕೇಂದ್ರದ ಈ ಪ್ರೋತ್ಸಾಹಧನ ಸಂಪೂರ್ಣ ಬರುತ್ತಿಲ್ಲ) ಹಾಗೂ ರಾಜ್ಯ ಸರ್ಕಾರದ ಪ್ರತಿಷ್ಠೆಯ ಐದು ಗ್ಯಾರಂಟಿಗಳ ಜೊತೆಯಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆಯ ನೀಡಿರುವ ರು. ೩೦೦೦ಗಳನ್ನು ಒಟ್ಟುಗೂಡಿಸಿ ಮಾಸಿಕ ರು.೧೫.೦೦೦ ಗೌರವಧನ ನಿಗದಿ ಮಾಡಬೇಕು ಮತ್ತು ಇತರ ೪ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷೆ ಮಮತಾ, ಜಿಲ್ಲಾ ಕಾರ್ಯಾಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಕಾರ್ಯದರ್ಶಿ ಮೇಘನಾ, ಗೀತಾ, ಮಂಜುಳ, ಶಿವಮ್ಮ, ತಾಹೀರಾ, ಕುಮಾರಿ, ಲಕ್ಷ್ಮಿ, ನವೀನ, ಕೋಮಲಾ, ವೀಣಾ ಸೇರಿದಂತೆ ಇತರರು ಭಾಗವಹಿಸಿದ್ದರು.ಫೋಟೋ ಶೀರ್ಷಿಕೆ: ಆಶಾ ಕಾರ್ಯಕರ್ತೆಯರ ಸಂಘದಿಂದ ನಡೆದ ಪ್ರತಿಭಟನೆ.