ಕನ್ನಡಪ್ರಭ ವಾರ್ತೆ ಚಾಮರಾಜನಗರ ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಹೋರಾಟಗಾರರ ಒಕ್ಕೂಟದ ವತಿಯಿಂದ ಖಾಲಿ ಡಬ್ಬ ಬಡಿದು ಪ್ರತಿಭಟನೆ ಗುರುವಾರ ನಡೆಸಲಾಯಿತು. ನಗರದ ಶ್ರೀಚಾಮರಾಜೇಶ್ವರ ಉದ್ಯಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾ ನಿರತರು ಖಾಲಿ ಡಬ್ಬ ಬಡಿದು ತಮಿಳುನಾಡು ಸರ್ಕಾರ, ರಾಜ್ಯ ಸರ್ಕಾರ, ಕೇಂದ್ರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಚಾ.ರಂ. ಶ್ರೀನಿವಾಸಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಾ ಬಂದಿದ್ದು, ರಾಜ್ಯ ಸರಿಯಾಗಿ ಮಳೆಯಾಗಿಲ್ಲ. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನಮಟ್ಟ ಕಡಿಮೆಯಾಗಿದೆ. ಕೇಂದ್ರ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿ. ಕನ್ನಡಿಗರ ಪಾಲಿಗೆ ಕಾವೇರಿ ನೀರಿನ ವಿಚಾರದಲ್ಲಿ ಹೂ ಮುಡಿಸಿ ಅನ್ಯಾಯ ಮಾಡಿದೆ. ಸುಪ್ರೀಂ ಕೋರ್ಟ್ ಕೂಡ ಅವೈಜ್ಞಾನಿಕ ತೀರ್ಪು ನೀಡಿದೆ ಎಂದು ದೂರಿದರು. ರಾಜ್ಯ ಸರ್ಕಾರ ನಾಡಿನ ಜನರ ಹಿತದೃಷ್ಟಿಯಿಂದ ತಮಿಳುನಾಡಿಗೆ ಬಿಟ್ಟಿರುವ ಕಾವೇರಿ ನೀರನ್ನು ಕೂಡಲೇ ನಿಲ್ಲಿಸಬೇಕು. ಇಲ್ಲದಿದ್ದರೆ ನಿರಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಶಾ.ಮುರಳಿ, ಪಣ್ಯದಹುಂಡಿ ರಾಜು, ಬಿ. ಕೃಷ್ಣಯ್ಯ, ಗು.ಪುರುಷೋತ್ತಮ್, ನಿಜಧ್ವನಿಗೋವಿಂದರಾಜು, ರವಿಚಂದ್ರ ಪ್ರಸಾದ್ ಕಹಳೆ, ಶಿವಣ್ಣ, ಲಿಂಗರಾಜು, ವೀರಭದ್ರ, ತಾಂಡಮೂರ್ತಿ, ಸೋಮವಾರಪೇಟೆ ಮಂಜು, ನಂಜುಂಡಸ್ವಾಮಿ, ಆಟೋ ಮಹದೇವಸ್ವಾಮಿ, ಸುರೇಶ್‌ಗೌಡ ಭಾಗವಹಿಸಿದ್ದರು. ರಾಜ್ಯ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕನ್ನಡ ಹೋರಾಟಗಾರರ ಒಕ್ಕೂಟದ ವತಿಯಿಂದ ಖಾಲಿ ಡಬ್ಬ ಬಡಿದು ಪ್ರತಿಭಟನೆ ನಡೆಸಲಾಯಿತು.