ಹಾನಗಲ್ಲ: ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ಮೂಲಕ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಅನಾನುಕೂಲ ಮಾಡುವ, ಪ್ರಾದೇಶಿಕ ಅಸಮಾನತೆಗೆ ಮುಂದಾಗುವ ಹುನ್ನಾರವನ್ನು ಪ್ರತಿಭಟಿಸಿ ಹಾನಗಲ್ಲ ಶ್ರೀ ಕುಮಾರೇಶ್ವರ ಕಲಾ ವಾಣಿಜ್ಯ ಮಹಾವಿದ್ಯಾಲಯದ ಪದವಿ ಮೌಲ್ಯಮಾಪನ ಕೇಂದ್ರದಲ್ಲಿ ಮಂಗಳವಾರ ಕೆಲಕಾಲ ಬಹಿಷ್ಕರಿಸಿ 70ಕ್ಕೂ ಅಧಿಕ ಮೌಲ್ಯಮಾಪಕರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಕನ್ನಡ ಮೌಲ್ಯಮಾಪನ ವಿಭಾಗದ ಚೇರಮನ್ ಡಾ. ಜಗದೀಶ ಹೊಸಮನಿ, ಶೈಕ್ಷಣಿಕ ಅವಕಾಶವನ್ನು ಮೊಟಕುಗೊಳಿಸುವ ಸರ್ಕಾರದ ನಿರ್ಣಯಗಳು ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿವೆ. ಗ್ರಾಮೀಣ ಮಕ್ಕಳ ಹಿತಕ್ಕೆ ತೆರೆದುಕೊಂಡಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಆರ್ಥಿಕ ಮಾನದಂಡದಲ್ಲಿ ಬಂದ್ ಮಾಡುವುದು ಸರಿ ಅಲ್ಲ. ಇದು ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಈ ಭಾಗದಲ್ಲಿ ಉಗ್ರ ಹೋರಾಟಕ್ಕೂ ನಾಂದಿಯಾದೀತು. ಇದನ್ನು ವಿರೋಧಿಸಿ ಈಗಾಗಲೇ ಹಲವು ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದು, ಸರ್ಕಾರ ನಾಡಿನ ಮಕ್ಕಳ ಹಿತಕ್ಕಾಗಿ ಹಾವೇರಿ ವಿಶ್ವವಿದ್ಯಾಲಯ ಮುಚ್ಚುವ ವಿಚಾರ ಕೈಬಿಡಬೇಕು ಎಂದರು.ಮೌಲ್ಯಮಾಪಕರಾದ ಡಾ. ಚಾಮರಾಜ ಕಮ್ಮಾರ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ರದ್ದು ಎಂಬ ಸುದ್ದಿಯೇ ಬರಸಿಡಿಲಿನಂತಿದೆ. ಇಲ್ಲಿನ ಮಕ್ಕಳಿಗೆ ಉನ್ನತ ಶಿಕ್ಷಣವನ್ನೇ ಮುಚ್ಚಿದಂತಾಗುತ್ತದೆ. ವಿಶೇಷವಾಗಿ ವಿದ್ಯಾರ್ಥಿನಿಯರು ನಿತ್ಯ ತಮ್ಮ ಮನೆಗಳಿಂದಲೇ ಬಂದು ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವ ಈ ಹಾವೇರಿ ವಿಶ್ವವಿದ್ಯಾಲಯವನ್ನು ಯಥಾಸ್ಥಿತಿ ಉಳಿಸಿಕೊಂಡು ಸರ್ಕಾರ ಉಪಕರಿಸಲಿ. ವೇಗದ ಪೈಪೋಟಿಯ ಶಿಕ್ಷಣದ ಕಾಲದಲ್ಲಿ ವಿಶ್ವವಿದ್ಯಾಲಯಗಳು ಮಕ್ಕಳ ಹತ್ತಿರ ಬರುವ ಅಗತ್ಯವಿದೆ. ಅದನ್ನು ಮೀರಿ ಹಾವೇರಿ ವಿಶ್ವವಿದ್ಯಾಲಯ ಮುಚ್ಚುವುದು ಬೇಡ ಎಂದರು.ಮೌಲ್ಯಮಾಪಕ ಡಾ. ಮಹಮ್ಮದ್‌ಶರೀಫ್ ಹಾನಗಲ್ಲ ಮಾತನಾಡಿ, ಅನುದಾನ ನೀಡಿ ಹಾವೇರಿ ವಿಶ್ವವಿದ್ಯಾಲಯವನ್ನು ಪ್ರೋತ್ಸಾಹಿಸುವ ಬದಲು ಮುಚ್ಚುವ ಮಾತು ಕೇಳುತ್ತಿರುವುದು ನಿಜಕ್ಕೂ ನಂಬಲಸಾಧ್ಯವಾದ ಸಂಗತಿ. ಇದು ಶೈಕ್ಷಣಿಕ ಪ್ರಗತಿ ಮೊಟಕುಗೊಳಿಸುವ ಹುನ್ನಾರ. ಸರ್ಕಾರ ಇಂಥ ನಿರ್ಣಯದ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಹಾಕುತ್ತಿದೆ ಎಂದರು.ಮೌಲ್ಯಮಾಪನ ಕೇಂದ್ರದ ಮುಖ್ಯ ಸಂಯೋಜಕ ಡಾ. ಎಂ.ಎಚ್. ಹೊಳೆಯಣ್ಣನವರ ಅವರ ಮೂಲಕ ಸರ್ಕಾರಕ್ಕೆ ಮೌಲ್ಯಮಾಪಕರು ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಉಪಮುಖ್ಯ ಸಂಯೋಜಕ ಡಾ. ಪ್ರಕಾಶ ಹೊಳೇರ, ಆಂಗ್ಲಭಾಷಾ ವಿಷಯದ ಚೇರಮನ್ ಡಾ. ಮಾಲತೇಶ ಬಂಡಿವಡ್ಡರ ಸೇರಿದಂತೆ ೭೦ಕ್ಕೂ ಅಧಿಕ ಮೌಲ್ಯಮಾಪಕರಿದ್ದರು.