ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಕೇಂದ್ರ ಸರ್ಕಾರ ಮಂಡನೆ ಮಾಡಿರುವ ಬಜೆಟ್‌ನಲ್ಲಿ ರಾಜ್ಯಕ್ಕೆ ಭಾರಿ ಅನ್ಯಾಯವಾಗಿದೆ ಎಂದು ಆರೋಪಿಸಿ ನಗರದ ಅಶೋಕ ವೃತ್ತದಲ್ಲಿ ಕಾಂಗ್ರೆಸ್ ನಾಯಕರು ಶನಿವಾರ ಚೊಂಬು ಹಿಡಿದು ಪ್ರತಿಭಟನೆ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ದೇಶದಲ್ಲಿ ಎರಡನೇ ಅತಿ ಹೆಚ್ಚು ಜಿಎಸ್‌ಟಿ ಕೊಡುವ ಕರ್ನಾಟಕವನ್ನೇ ಕೇಂದ್ರ ಮರೆತಿದೆ. ರಾಜ್ಯಕ್ಕಾದ ಅನ್ಯಾಯ ಸರಿಪಡಿಸದೇ ಇದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ರಾಜ್ಯಕ್ಕೆ ಮೋದಿ ಸರ್ಕಾರ ತುಂಬಾ ಅನ್ಯಾಯ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಮಲತಾಯಿ ಧೋರಣೆ ಹೊಂದಿದೆ. ಮೋದಿ ಸರ್ಕಾರವು ಅಧಿಕಾರ ಉಳಿಸಿಕೊಳ್ಳುವಲ್ಲೇ ಚಿಂತೆ ಮಾಡುತ್ತಿದೆ. ಕರ್ನಾಟಕ ಅಭಿವೃದ್ಧಿಯ ಬಗ್ಗೆ ಕನಿಷ್ಠ ಕಾಳಜಿಯೂ ಇಲ್ಲ ಎಂದು ಕಿಡಿಕಾರಿದರು.ರಾಜ್ಯದಿಂದ ಮೈತ್ರಿ ಪಕ್ಷದಿಂದ ಗೆದ್ದಿರುವ ೧೯ ಸಂಸದರು ರಾಜ್ಯಕ್ಕಾದ ಅನ್ಯಾಯವನ್ನು ಸರಿಪಡಿಸುವ ಕುರಿತು ಧ್ವನಿ ಎತ್ತದೆ ಇರುವುದು ಮಾತ್ರ ದುರಂತವೇ ಸರಿ. ತಮ್ಮದೇ ಸರ್ಕಾರ ಇದ್ದರೂ ಆಗಿರುವ ಅನ್ಯಾಯವನ್ನು ಸರಿಪಡಿಸುವ ಪ್ರಯತ್ನವನ್ನಾದರೂ ಮಾಡಬೇಕು. ಅದನ್ನು ಮಾಡುತ್ತಿಲ್ಲ ಎಂದರು.
ರಾಜ್ಯದವರೇ ಕೇಂದ್ರದಲ್ಲಿ ಮಂತ್ರಿಗಳಾಗಿದ್ದಾರೆ. ಅದರ ಬಗ್ಗೆಯೂ ಅವರು ಚಕಾರ ಎತ್ತಿಲ್ಲ. ಇದು ರಾಜ್ಯಕ್ಕೆ ಮಾಡಿದ ಮೋಸ. ಯಾವುದೇ ನೀರಾವರಿ ಯೋಜನೆಗಳಿಗೂ ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ. ರಾಜ್ಯದ ಜನರಿಗೆ ಖಾಲಿ ಚೊಂಬು ಕೊಟ್ಟು ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಪ್ರಧಾನಿ ಮೋದಿ ಸರ್ಕಾರವು ತಮ್ಮ ಅಧಿಕಾರ ಉಳಿಸಿಕೊಳ್ಳುವ ಚಿಂತೆಯಲ್ಲಿದೆ. ಆಂಧ್ರ ಹಾಗೂ ಬಿಹಾರ ರಾಜ್ಯಕ್ಕೆ ಹೆಚ್ಚು ಅನುದಾನ ಕೊಟ್ಟು ರಾಜಕೀಯ ತಾರತಮ್ಯ ಮಾಡಲಾಗಿದೆ. ಇದು ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ. ಮುಂದೆ ಇದೇ ರೀತಿ ಮಾಡಿದರೆ ರಾಜ್ಯದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ರಾಜ್ಯದ ಜನತೆ ಇದೆಲ್ಲವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ಚುನಾವಣಾ ಪೂರ್ವದಲ್ಲೇ ನಾವು ಬಿಜೆಪಿಗೆ ಮತ ಹಾಕಬೇಡಿ. ಅವರು ರಾಜ್ಯದ ಜನರಿಗೆ ಖಾಲಿ ಚೊಂಬು ಕೊಡಲಿದ್ದಾರೆ ಎಂದು ಹೇಳಿದ್ದೆವು. ಆದರೆ ಜನತೆ ೧೯ ಬಿಜೆಪಿ ಮೈತ್ರಿ ಸಂಸದರಿಗೆ ಗೆಲ್ಲಲು ಮತ ಹಾಕಿದರು. ಅವರು ಅಧಿಕಾರಕ್ಕೆ ಬಂದ ಬಳಿಕ ನಿಜಕ್ಕೂ ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಖಾಲಿ ಚೊಂಬನ್ನೇ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಎನ್‌ಡಿಎ ಸರ್ಕಾರವು ಒಂದೇ ವರ್ಷದಲ್ಲಿ ಪತನವಾಗುವ ಸಾಧ್ಯತೆ ಇದೆ. ಬಿಹಾರ ಹಾಗೂ ಆಂಧ್ರಕ್ಕೆ ಹೆಚ್ಚಿನ ಅನುದಾನ ಕೊಟ್ಟಿದ್ದಾರೆ. ಮೋದಿ ಸರ್ಕಾರವು ರಾಜಕೀಯ ಕಾರಣಕ್ಕೆ ಅಭಿವೃದ್ಧಿಗೆ ಈ ರೀತಿ ಮಲತಾಯಿ ಧೋರಣೆ ಮಾಡುವುದನ್ನ ನಾವು ಸಹಿಸಲ್ಲ. ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಿದ್ದೇವೆ. ಸಂಸತ್ ಮುಂದೆಯೂ ಹೋರಾಟ ನಡೆದಿದೆ. ಮುಂದೆಯೂ ನಡೆಯಲಿದೆ ಎಂದರು.ಕಾಂಗ್ರೆಸ್ ಮುಖಂಡರಾದ ಕಾಟನ್ ಪಾಷಾ, ಕೃಷ್ಣ ಇಟ್ಟಂಗಿ, ಕೃಷ್ಣಾರಡ್ಡಿ ಗಲಬಿ, ಟಿ. ಬಾಲಚಂದ್ರನ್, ಗಾಳೆಪ್ಪ ಪೂಜಾರ, ಮಲ್ಲು ಪೂಜಾರ, ಕಿಶೋರಿ ಬೂದನೂರು ಜ್ಯೋತಿ ಗೊಂಡಬಾಳ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.ರಾಜ್ಯಕ್ಕಿಲ್ಲ ನ್ಯಾಯ:
ಆಂಧ್ರ ಮತ್ತು ಬಿಹಾರ ರಾಜ್ಯಕ್ಕೆ ನೀಡಿರುವ ವಿಶೇಷ ಪ್ಯಾಕೇಜ್‌ನಂತೆ ರಾಜ್ಯಕ್ಕೆ ನ್ಯಾಯ ಯಾಕೆ ನೀಡಿಲ್ಲ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಪ್ರಶ್ನಿಸಿದರು.ಕೇಂದ್ರ ಬಜೆಟ್‌ನಲ್ಲಿ ಆದ ಅನ್ಯಾಯದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.