ರಾಜ್ಯ ಸರ್ಕಾರದ ವಿರುದ್ಧ ದಸಂಸ ಮುಖಂಡರಿಂದ ಪ್ರತಿಭಟನೆ

KannadaprabhaNewsNetwork | Published : Jul 27, 2024 12:53 AM

ಸಾರಾಂಶ

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನಾಕಾಯ್ದೆ 2013 ಅನ್ವಯ ಕಲ್ಯಾಣ ಅಭಿವೃದ್ಧಿಗೆ ಮೀಸಲು ಇಡುವ ಹಣವನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿ ಮೀಸಲಿಟ್ಟ ಹಣವನ್ನು ಪಂಚ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದು ಕಾಯ್ದೆಯ ಉಲ್ಲಂಘನೆಯಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ 25,000 ಕೋಟಿ ರು. ಹಣವನ್ನು ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೋಮನಹಳ್ಳಿ ಅಂದಾನಿ ನೇತೃತ್ವದಲ್ಲಿ ಪಟ್ಟಣದ ಪ್ರವಾಸಿ ಮಂದಿರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮಹಿಳೆಯರು ಸೇರಿದಂತೆ ನೂರಾರು ಮಂದಿ ದಲಿತಪರ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆ ನಡೆಸಿದ ನಂತರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಧರಣಿ ನಡೆಸಿದರು.

ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿರುವ, ಎಸ್ಸೆಸ್ಸೆಲ್ಸಿ ತೇರ್ಗಡೆ ಹೊಂದುವ ಮಕ್ಕಳ ಪ್ರೋತ್ಸಾಹ ಧನವನ್ನು ತಡೆ ಹಿಡಿದಿರುವುದನ್ನು ತೀವ್ರವಾಗಿ ಖಂಡಿಸಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನಾಕಾಯ್ದೆ 2013 ಅನ್ವಯ ಕಲ್ಯಾಣ ಅಭಿವೃದ್ಧಿಗೆ ಮೀಸಲು ಇಡುವ ಹಣವನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿ ಮೀಸಲಿಟ್ಟ ಹಣವನ್ನು ಪಂಚ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿರುವುದು ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದರು.

ಹಗರಣದ ಬಗ್ಗೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ಅನುದಾನವನ್ನು ದುರುಪಯೋಗ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪಡೆಯುವಂತೆ ಆಗ್ರಪಡಿಸಿದರು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಎಸ್. ಸಿ. ಎಸ್. ಟಿ. ವಿದ್ಯಾರ್ಥಿಗಳ ಪ್ರೋತ್ಸಾಹ ಧನವನ್ನು ನಿಲ್ಲಿಸಿರುವ ಸರ್ಕಾರದ ಕ್ರಮಕ್ಕೆ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಪರಿಶಿಷ್ಟ ಪಂಗಡದ ವಾಲ್ಮೀಕಿ ನಿಗಮದಲ್ಲಿ ಸುಮಾರು 187 ಕೋಟಿ ರು ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಗೊಳಿಸಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಮಂತ್ರಿಗಳು ಮತ್ತು ಶಾಸಕರುಗಳನ್ನು ಶಾಸಕತ್ವದಿಂದ ಮಜಾ ಗೊಳಿಸಿ ಮತ್ತೆ ಇವರುಗಳು ಶಾಶ್ವತವಾಗಿ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಎಂ.ಶಿವಮೂರ್ತಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ತೈಲೂರು ಬೋರಯ್ಯ, ಬಿಎಸ್ಪಿ ತಾಲೂಕು ಅಧ್ಯಕ್ಷ ಬೋರಯ್ಯ, ಶಂಕರ್, ಶಿವು, ಅಂಬರೀಶ್, ಮುತ್ತಯ್ಯ, ಮರಂಕಯ್ಯ, ರಾಜೇಶ್, ಗಿರೀಶ್, ಸಣ್ಣಪ್ಪ, ರಂಗಸ್ವಾಮಿ ಮತ್ತಿತರರು ಇದ್ದರು.

Share this article