ಸ್ನಾತಕೋತ್ತರ ಕೇಂದ್ರದಿಂದ ವಜಾಗೊಂಡ ತಾತ್ಕಾಲಿಕ ಬೋಧಕೇತರ ಸಿಬ್ಬಂದಿ ಪ್ರತಿಭಟನೆ

KannadaprabhaNewsNetwork |  
Published : Dec 13, 2023, 01:00 AM IST
ವಜಾಗೊಂಡ ಬೋಧಕೇತರ ಸಿಬ್ಬಂದಿಗಳು ಪ್ರತಿಭಟನೆ | Kannada Prabha

ಸಾರಾಂಶ

ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರಿಸುವಂತೆ ಒತ್ತಾಯಿಸಿ ವಜಾಗೊಂಡ ಬೋಧಕೇತರ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಕೊಡಗು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾತ್ಕಾಲಿಕ ಬೋಧಕೇತರ ಸಿಬ್ಬಂದಿಗಳ ಸೇವೆಯನ್ನು ಮುಂದುವರಿಸುವಂತೆ ಒತ್ತಾಯಿಸಿ ವಜಾಗೊಂಡ ಬೋಧಕೇತರ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಅಧೀನದ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಆರಂಭದಿಂದಲೇ ಸೇವೆಯಲ್ಲಿದ್ದ 24 ಮಂದಿ ಸಿಬ್ಬಂದಿಯನ್ನು ಸೇವೆಯಿಂದ ಕೈಬಿಡಲಾಗಿದೆ. ಇದರಿಂದಾಗಿ ತಮ್ಮ ಜೀವನ ಅತಂತ್ರವಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.

44 ಮಂದಿ ಬೋಧಕೇತರ ಸಿಬ್ಬಂದಿಗಳ ಪೈಕಿ 18 ಮಂದಿಯನ್ನು ‌ಮಾತ್ರ ಸೇವೆಯಲ್ಲಿ ಮುಂದುವರೆಸಿದ್ದು ಕಳೆದ ಹಲವು ವರ್ಷಗಳಿಂದ ಕೇಂದ್ರದ ಅಭಿವೃದ್ಧಿಗೆ ಶ್ರಮಿಸಿದ, ಎಲ್ಲ ಅರ್ಹತೆ ಹೊಂದಿರುವ ಸಿಬ್ಬಂದಿಗಳನ್ನು ಕೈಬಿಡಲಾಗಿದೆ. ಅತ್ತ ಮಂಗಳೂರು ವಿಶ್ವವಿದ್ಯಾನಿಲಯ, ಇತ್ತ ಕೊಡಗು ವಿಶ್ವವಿದ್ಯಾಲಯವೂ ನಮ್ಮನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ಸೇವಾ ಅನುಭವ, ಮಾನದಂಡಗಳನ್ನು ಪರಿಗಣಿಸದೆ ಇತ್ತೀಚೆಗೆ ನೇಮಕಗೊಂಡ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ನಿರತರಾದ ಸವಿತಾ ರಾಣಿ, ಕೆ.ಜೆ.ಹರೀಶ್, ಎ.ಆರ್.ಗಣೇಶ್, ಯೋಗೇಶ್ ಮತದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮಗೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವವಿದ್ಯಾಲಯದ ಕಚೇರಿ ಕೆಲಸ ನಿರ್ವಹಿಸುತ್ತಿದ್ದ ಸವಿತಾರಾಣಿ, ಸ್ನಾತಕೋತ್ತರ ಕೇಂದ್ರದ ಕೆಲಸವನ್ನು ನಂಬಿ ಜೀವನ ಕಟ್ಟಿಕೊಂಡ ಹಲವು ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿದೆ. 18 ಮಂದಿಯನ್ನು ಮುಂದುವರಿಸಿದಂತೆ ನಮ್ಮನ್ನು ಕೂಡ ಸೇವೆಯಲ್ಲಿ ಮುಂದುವರೆಸಬೇಕಿದೆ. ಇಲ್ಲದಿದ್ದರೆ ಕೆಲಸ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿಯುವ ಪರಿಸ್ಥಿತಿ ಎದುರಾಗಲಿದೆ ಎಂದರು.

ಸಹಾಯಕ ಗ್ರಂಥಾಲಯ ಸಿಬ್ಬಂದಿಯಾಗಿದ್ದ ಹರೀಶ್ ಮಾತನಾಡಿ, ಬೇರೆ ವಿಶ್ವವಿದ್ಯಾಲಯಗಳಲ್ಲಿ ಇಲ್ಲದ ಸಮಸ್ಯೆ‌ ಕೊಡಗು ವಿಶ್ವವಿದ್ಯಾಲಯದಲ್ಲಿ ತಲೆದೋರಿದೆ. ಉಳಿದ 18 ಮಂದಿಯನ್ನು ಯಾವ ಆಧಾರದಲ್ಲಿ ಸೇವೆಯಲ್ಲಿ ಮುಂದುವರೆಸಿದ್ದಾರೆಂದು ಸ್ಪಷ್ಟನೆ ನೀಡಬೇಕಾಗಿದೆ . ಜೇಷ್ಠತೆ ಆಧಾರ, ಅನುಭವ ಹಾಗೂ ವಿದ್ಯಾಭ್ಯಾಸದಲ್ಲಿ ಮುಂದಿರುವವರನ್ನು ಕಡೆಗಣಿಸಿ ಇತ್ತೀಚಿಗೆ ಕೆಲಸಕ್ಕೆ ಸೇರಿದ, ಕನಿಷ್ಠ ವಿದ್ಯಾರ್ಹತೆ ಹೊಂದಿದವರನ್ನು ಸೇವೆಯಲ್ಲಿ ಮುಂದುವರಿಸಿರುವುದು ಎಷ್ಟು ಸರಿ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ್ ಆಲೂರು ಪ್ರತಿಭಟನಾಕಾರರಿಗೆ ವಾಸ್ತವ ಪರಿಸ್ಥಿತಿ‌ ಮನದಟ್ಟು‌ ಮಾಡಿ, ಈ ಬಗ್ಗೆ ಮಂಗಳೂರು ವಿಶ್ವವಿದ್ಯಾನಿಲಯವನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು.ಸಿಬ್ಬಂದಿಯನ್ನು ಸೇವೆಯಿಂದ ತೆಗೆದಿರುವುದಕ್ಕೂ ಕೊಡಗು ವಿಶ್ವವಿದ್ಯಾಲಯಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಮಾಹಿತಿ ನೀಡಿದರು.ಪ್ರತಿಭಟನೆಯಲ್ಲಿ ವಜಾಗೊಂಡ ಸಿಬ್ಬಂದಿಗಳಾದ ಚಂದ್ರಿಕಾ, ರಾಧಿಕಾ, ಚೈತ್ರಾ ,ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ