ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಸೇರಿದ ರೈತರು, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರಣಿ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸಬೇಕು. ಕರಾಳ ಕಾಯಿದೆಗಳಾದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ, ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.ಬ್ಯಾಂಕುಗಳಲ್ಲಿ ಒತ್ತೆ ಇಟ್ಟಿರುವ ಒಡವೆಗಳನ್ನು ನವೀಕರಿಸಲು ಬಡ್ಡಿ ಪಡೆದು ನವೀಕರಿಸುವಂತೆಯೂ, ಸಾಮಾಜಿಕ ಭದ್ರತಾ ಯೋಜನೆಗಳಾದ ವಿಧವಾ ವೇತನ, ಅಂಗವಿಕಲರ ವೇತನ, ಗೃಹಲಕ್ಷ್ಮ್ಮೀ ಹಣ, ಕಿಸಾನ್ ಸಮ್ಮದ್ ಹಣವನ್ನು ಸಾಲಗಳಿಗೆ ಹೊಂದಾಣಿಕೆ ಮಾಡಬಾರದು. ಕೇಂದ್ರ ಸರ್ಕಾರ ಆರ್‌ಬಿಐನ ಅಧೀನದಲ್ಲಿರುವ ಎಲ್ಲಾ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು. ಮೈಕ್ರೋ ಫೈನಾನ್ಸ್ ಕಂಪನಿಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ಶೋಷಣೆ ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಕೇವಲ ಅಕ್ಕಿಯನ್ನು ಮಾತ್ರ ವಿತರಣೆ ಮಾಡದೆ ರಾಗಿ ಬೆಳೆಯುವ ಕಡೆಗಳಲ್ಲಿ ರಾಗಿ, ಜೋಳ ಬೆಳೆಯುವ ಕಡೆಗಳಲ್ಲಿ ಜೋಳ ಸೇರಿದಂತೆ ಇತರೆ ಧಾನ್ಯಗಳನ್ನು ವಿತರಿಸುವಂತೆ ಕೃಷಿ ಸಚಿವರೊಂದಿಗೆ ನಡೆದ ಸಭೆಯಲ್ಲಿ ಒತ್ತಾಯಿಸಿದ್ದೇವೆ. ಇದಕ್ಕೆ ೯೬೦೦ ಕೋಟಿ ರು. ಅನುದಾನ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು. ನಮ್ಮ ಲೆಕ್ಕಾಚಾರದಲ್ಲಿ ೬೨೦೦ ಕೋಟಿ ರು. ಬೇಕಾಗುತ್ತದೆ. ರೈತರಿಂದಲೇ ಖರೀದಿ ಮಾಡಿ ಅದನ್ನು ವಿತರಣೆ ಮಾಡಬೇಕು. ಅದು ಬಿಟ್ಟು ಇವರು ಆಂಧ್ರಪ್ರದೇಶದಿಂದ ಖರೀದಿ ಮಾಡಿ ಇಲ್ಲಿ ವಿತರಣೆ ಮಾಡುವಂತಹ ವ್ಯವಸ್ಥೆ ರೂಪಿಸಿದ್ದಾರೆ. ಇದರಿಂದ ಹೆಚ್ಚುವರಿ ವೆಚ್ಚ ಬರುತ್ತದೆ ಎಂದು ವಿವರಿಸಿದರು.
ನಿವೃತ್ತ ಅಧ್ಯಾಪಕ ಡಾ. ಹುಲ್ಕೆರೆ ಮಹದೇವು ಮಾತನಾಡಿ, ಸರ್ಕಾರ ಕಾವೇರಿ ಜಲಾಶಯಗಳಿಂದ ಬೆಂಗಳೂರಿನ ಜನರಿಗೆ ನೀರೊದಗಿಸುವ ಯೋಜನೆಗಳನ್ನು ರೂಪಿಸುತ್ತಿರುವುದರಿಂದ ಇಲ್ಲಿನ ರೈತರಿಗೆ ತೊಂದರೆಯಾಗುತ್ತದೆ. ಕೃಷಿ ಉಪಯೋಗಕ್ಕಾಗಿ ಕೆಆರ್‌ಎಸ್ ಅಣೆಕಟ್ಟೆ ನಿರ್ಮಾಣ ಮಾಡಲಾಗಿದೆ ಎಂಬುದನ್ನು ಇಂದಿನ ರಾಜಕಾರಣಿಗಳು ಮರೆತಂತಿದೆ. ಈ ಬಗ್ಗೆ ರೈತರು ಆಕ್ಷೇಪ ಎತ್ತಿದರೆ ಇವರು ಕುಡಿಯುವ ನೀರನ್ನೂ ಕೊಡದವರು ಎಂಬ ಅಪವಾದ ಹೊರಿಸುತ್ತಾರೆ ಎಂದು ಕಿಡಿಕಾರಿದರು.