ಕನ್ನಡಪ್ರಭವಾರ್ತೆ ತಿಪಟೂರು
ತಾಲೂಕಿನಲ್ಲಿ ಭೀಕರ ಬರವಿದೆ. ಬೆನ್ನಲ್ಲೇ ಸಮರ್ಪಕ ವಿದ್ಯುತ್ ಇಲ್ಲದೆ ಕೃಷಿ ಪಂಪ್‌ಸೆಟ್‌ಗಳು ಸ್ಥಗಿತಗೊಂಡು ಬೆಳೆ ಒಣಗುತ್ತಿವೆ. ಮೇವಿನ ಕೊರತೆಯಿಂದ ಗೋವು ಸಾಕಾಣಿಕೆದಾರರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ತಾಲೂಕಿನಲ್ಲಿ ತೆಂಗು ವಾಣಿಜ್ಯ ಬೆಳೆಯಾಗಿದ್ದು ಅಂತರ್ಜಲ ಕೊರತೆ ಎದುರಾಗಿದೆ. ಹಣ ಕೊಟ್ಟರೂ ಮೇವು ಎಲ್ಲೂ ಸಿಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹಳ್ಳಿಕಾರ್ ಸಂಘದ ಮುಖಂಡ ಮಡೇನೂರು ವಿನಯ್ ಅವರು ಆಡಳಿತ ವರ್ಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಕ್ಟೋಬರ್ ೧ರಂದು ಬೆಳಗ್ಗೆ ತಹಸೀಲ್ದಾರ್ ಕಚೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳು ಬೆಂಬಲ ನೀಡುವಂತೆ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಪದ್ದಣ್ಣ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ, ಮುಖಂಡರಾದ ಬಾಳೆಕಾಯಿ ನಟರಾಜು, ಗೌಡನಕಟ್ಟೆ ಶಶಿಧರ್, ರಂಗಪುರ ಲೋಕೇಶ್, ದಿಲೀಪ್ ಸೂಗೂರು, ಕೃಷ್ಣ, ಉಮೇಶ್ ಗೊರಗಾನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.