ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಉಪನ್ಯಾಸಕರು ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಹಿಸಬೇಕು. ಇಲಾಖೆಯಲ್ಲಿರಿನ ಪ್ರಸ್ತುತ ಇರುವ 32:1 ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು ಎನ್‌ಸಿಇಆರ್‌ಟಿ ಮಾರ್ಗಸೂಚಿಗಳನ್ವಯ ಮರುನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಕಳೆದ ಮೂರು ವರ್ಷಗಳಿಂದ ಪರಿಷ್ಕರಿಸದಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು ತಕ್ಷಣ ಪರಿಷ್ಕರಿಸಿ ಹಿಂದಿನ ವರ್ಷದ ಬಾಕಿ ಇರುವ ಸಂಭಾವನೆಗಳನ್ನು ತಕ್ಷಣ ಪಾವತಿಸಬೇಕು. ಪ್ರಥಮ ಆಧ್ಯತೆಯಾಗಿ ಸಂಭವಾನೆಗಳನ್ನು ಖಾಸಗಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಿಗೆ ವಿತರಿಸಬೇಕು ಎಂದು ಆಗ್ರಹಿಸಿದರು.ಕಾರ್ಯಭಾರ ಕೊರತೆ ಇರುವ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹಿಂಪಡೆದು ಅವರಿಗೆ ಸಮೀಪದ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಚನ್ನಕೃಷ್ಣಯ್ಯ, ವೆಂಕಟೇಗೌಡ, ರಾಮಕೃಷ್ಣೇಗೌಡ, ಹನುಮಂತಪ್ಪ, ಗುರುಲಿಂಗಯ್ಯ, ರವೀಲಾ, ಲತಾ, ಶಿವಲಿಂಗಯ್ಯ, ತಮ್ಮೇಗೌಡ, ಶಿವಲಿಂಗೇಗೌಡ, ಲಕ್ಷ್ಮೀಕಾಂತ್ ಇತರರು ಪಾಲ್ಗೊಂಡಿದ್ದರು.