ಕನ್ನಡಪ್ರಭ ವಾರ್ತೆ ಹಾಸನ
ತಮಿಳುನಾಡಿನ ತಂಜಾವೂರಿನಲ್ಲಿ ಆಗಸ್ಟ್ ೮ ಮತ್ತು ೯ರಂದು ನಡೆದ ೪ನೇ ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಹಾಸನ ಜಿಲ್ಲಾ ಕರಾಟೆ ಸಂಸ್ಥೆ ಹಾಗೂ ಹಾಸನ ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಕರಾಟೆ ಪಟುಗಳು ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಟೀಂ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ.ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಸಹಯೋಗದಲ್ಲಿ ಕಿಂಗ್ ಷಿಥೋ-ರಯೋ ಸ್ಪೋರ್ಟ್ಸ್ ಕರಾಟೆ-ಡೋ ಇಂಡಿಯಾ ಹಾಗೂ ಕಿಂಗ್ ಸ್ಪೋರ್ಟ್ಸ್ ಸಿಲಂಬಮ್, ತಮಿಳುನಾಡು ಇವರ ಆಶ್ರಯದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ದೇಶದ ವಿವಿಧ ಭಾಗಗಳ ಕ್ರೀಡಾಪಟುಗಳೊಂದಿಗೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಹಾಸನದ ಕ್ರೀಡಾಪಟುಗಳು ಭಾಗವಹಿಸಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಕುಮಿತೆ ವಿಭಾಗದಲ್ಲಿ ಸಾಕ್ಷಿ ಆರ್. ಎಂ. ದ್ವಿತೀಯ ಸ್ಥಾನ, ಜಯಂತ್ ಗೌಡ ಕೆ. ಎಂ. ದ್ವಿತೀಯ ಸ್ಥಾನ, ರೋಹನ್ ಗೌಡ ಎಚ್. ಪ್ರಥಮ ಸ್ಥಾನ, ಉಲ್ಲಾಸ್ ಪಿ. ಗೌಡ ತೃತೀಯ ಸ್ಥಾನ, ಗೌರವ್ ಗೌಡ ಸಿ.ಕೆ. ತೃತೀಯ ಸ್ಥಾನ, ಜ್ಞಾನತ್ರಿ ಜಯರಾಮ್ ಪ್ರಥಮ ಸ್ಥಾನ ಹಾಗೂ ಶೋಭಿತ್ ಎಂ.ಎಸ್. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕಟಾ ವಿಭಾಗದಲ್ಲಿ ಶಶಾಂಕ್, ದ್ವಿತೀಯ ಸ್ಥಾನ, ಡೊನಿಕಾ ಕೆ.ಕೆ. ದ್ವಿತೀಯ ಸ್ಥಾನ ಹಾಗೂ ಕೀರ್ತನಾ ಎಲ್. ಪ್ರಥಮ ಸ್ಥಾನ ಪಡೆದು ಹಾಸನದ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತಂದಿದ್ದಾರೆ. ವೈಯಕ್ತಿಕ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳ ಒಟ್ಟಾರೆ ಸಾಧನೆಯ ಫಲವಾಗಿ ಹಾಸನ ತಂಡ ಟೀಂ ಚಾಂಪಿಯನ್‌ಶಿಪ್ ಪಡೆದುಕೊಂಡಿರುವುದು ವಿಶೇಷವಾಗಿದೆ.
ಉಚಿತ ತರಬೇತಿ ನೀಡುತ್ತಿರುವ ಕರಾಟೆ ಗುರು:ಕ್ರೀಡಾಪಟುಗಳ ಸಾಧನೆಯ ಹಿಂದೆ ತರಬೇತುದಾರ ಕರಾಟೆ ಡಾನ್ ಮಹದೇವ ಅವರ ಪರಿಶ್ರಮವೂ ಪ್ರಮುಖವಾಗಿದೆ. ಅವರು ಕ್ರೀಡಾಪಟುಗಳಿಗೆ ಉಚಿತವಾಗಿ ಕರಾಟೆ ತರಬೇತಿ ನೀಡುತ್ತಿದ್ದು, ಗ್ರಾಮೀಣ ಹಾಗೂ ಸಾಮಾನ್ಯ ಕುಟುಂಬಗಳ ಪ್ರತಿಭಾವಂತ ಕ್ರೀಡಾಪಟುಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಹಾಸನದ ಕ್ರೀಡಾಪಟುಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದಕ್ಕೆ ಹಾಸನ ಜಿಲ್ಲಾ ಕರಾಟೆ ಸಂಸ್ಥೆ ಹಾಗೂ ಹಾಸನ ಜಿಲ್ಲಾ ಅಮೆಚೂರ್ ಬಾಡಿ ಬಿಲ್ಡರ್ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಪೋಷಕರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಸ್ವಾತಂತ್ರ್ಯೋತ್ಸವದಲ್ಲಿ ಸನ್ಮಾನಕ್ಕೆ ಮನವಿ
ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಟೀಂ ಚಾಂಪಿಯನ್‌ಶಿಪ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ಗೆದ್ದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿರುವ ಕ್ರೀಡಾಪಟುಗಳನ್ನು ಆಗಸ್ಟ್ ೧೫ರಂದು ನಡೆಯುವ ಜಿಲ್ಲಾ ಮಟ್ಟದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಬೇಕು ಎಂದು ಸಂಘಟಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಇಂತಹ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಇನ್ನಷ್ಟು ಯುವಕರು ಕ್ರೀಡಾ ಕ್ಷೇತ್ರದತ್ತ ಆಕರ್ಷಿತರಾಗಲು ಸಾಧ್ಯವಾಗಲಿದೆ. ಜಿಲ್ಲಾಡಳಿತ ಕ್ರೀಡಾಪಟುಗಳ ಸಾಧನೆಯನ್ನು ಪರಿಗಣಿಸಿ ಸೂಕ್ತ ಗೌರವ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಜೆ.ಐ. ನಿರಂಜನ್ ರಾಜ್ ಅವರು ಈ ಸಾಧನೆಯ ಕುರಿತು ಮಾಹಿತಿ ನೀಡಿದ್ದು, ಕ್ರೀಡಾಪಟುಗಳ ಮುಂದಿನ ತರಬೇತಿ ಹಾಗೂ ಸ್ಪರ್ಧೆಗಳಿಗೆ ಅಗತ್ಯ ಪ್ರೋತ್ಸಾಹ ನೀಡುವಂತೆ ಕ್ರೀಡಾಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.