ಸ್ಥಳೀಯ ಲಾರಿ ಮಾಲೀಕರ ಸಂಘದಿಂದ ಪ್ರತಿಭಟನೆ

KannadaprabhaNewsNetwork | Published : Apr 17, 2025 12:07 AM

ಸಾರಾಂಶ

ಚಾಮರಾಜನಗರದಲ್ಲಿ ರಾಜ್ಯ ಸರ್ಕಾರ ಡಿಸೇಲ್ ಮೇಲೆ ತೆರಿಗೆ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ರಾಜ್ಯ ಲಾರಿ ಮಾಲಿಕರ ಸಂಘ ಕರೆ ನೀಡಿರುವ ಲಾರಿಗಳ ಬಂದ್‌ಗೆ ಚಾ.ನಗರದ ಲೋಕಲ್ ಲಾರಿ ಮಾಲೀಕ ಸಂಘ ಬೆಂಬಲ ನೀಡಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ರಾಜ್ಯ ಸರ್ಕಾರ ಡಿಸೇಲ್ ಮೇಲೆ ತೆರಿಗೆ ಹೆಚ್ಚಳ ವಿವಿಧ ತೆರಿಗೆಗಳ ಹೆಚ್ಚಳವನ್ನು ಖಂಡಿಸಿ ರಾಜ್ಯ ಲಾರಿ ಮಾಲಿಕರ ಸಂಘ ಕರೆ ನೀಡಿರುವ ಲಾರಿಗಳ ಬಂದ್‌ಗೆ ಚಾ.ನಗರದ ಸ್ಥಳೀಯ ಲಾರಿ ಮಾಲಿಕ ಸಂಘ ಬೆಂಬಲ ನೀಡಿ ಪ್ರತಿಭಟನೆ ನಡೆಸಿದರು. ನಗರದ ಹೊರ ವಲಯದಲ್ಲಿರುವ ಬೈಪಾಸ್ ರಸ್ತೆಯ ಬದಿಯಲ್ಲಿ ಸರಕು ಸಾಗಾಣಿಕೆ ಲಾರಿಗಳ ಸಂಚಾರವನ್ನು ಸ್ಥಗಿತಗೊಳಿಸಿ, ರಾಜ್ಯ ಸಂಘದ ಕರೆಗೆ ಸಂಪೂರ್ಣ ಬೆಂಬಲ ನೀಡಿದರು. ಅಲ್ಲದೇ ರಾಜ್ಯ ಸರ್ಕಾರ ಕೂಡಲೇ ಲಾರಿ ಮಾಲಿಕರ ಬೇಡಿಕೆಯನ್ನು ಈಡೇರಿಸಲು ಮುಂದಾಗಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರೋಧಿ ಧೋರಣೆಯ ವಿರುದ್ಧ ಲಾರಿ ಮಾಲಿಕರು ಘೋಷಣೆ ಕೂಗಿದರು. ಚಾಮರಾಜನಗರ ಸ್ಥಳೀಯ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಜಿಯಾವುಲ್ಲಾ ಮಾತನಾಡಿ, ದಿನ ದಿನೇ ಸರಕು ಸಾಗಾಣಿಕೆಗಳ ದರ ಏರಿಕೆಯಾಗುತ್ತಿದೆ. ಲಾರಿ ಮಾಲಿಕರು ಮತ್ತು ಚಾಲಕರು ಜೀವನ ನಡೆಸುವುದೇ ಕಷ್ಟವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ರೀತಿಯ ತೆರಿಗೆಯನ್ನು ಲಾರಿ ಮಾಲಿಕರ ಮೇಲೆ ಹಾಕಲಾಗುತ್ತಿದೆ. ಡಿಸೇಲ್ ದರ ಏರಿಕೆಯಿಂದ ಆರಂಭವಾಗೊಂಡು ಎಲ್ಲ ರೀತಿಯ ತೆರಿಗಳ ಭಾರ ನಮ್ಮ ಮೇಲೆ ಬೀಳುತ್ತಿದೆ. ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಲಾರಿ ಚಾಲಕ ವೃತ್ತಿಯನ್ನು ಆರಂಭಿಸಿದ್ದೇವೆ. ಲಾರಿಗಳನ್ನು ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡು ಪ್ರತಿ ತಿಂಗಳು ಇಎಂಇ ಕಟ್ಟಲು ಪರದಾಡುವಂತಾಗಿದೆ. ಖರ್ಚು ಜಾಸ್ತಿಯಾಗುತ್ತಿದೆ. ಅದಾಯ ಮಾತ್ರ ಕಡಿಮೆ. ಹೀಗಾಗಿ ಲಾರಿಗಳನ್ನು ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ ಎಂದರು. ಈಗಾಗಲೇ ಟೋಲ್ ದರಗಳನ್ನು ಸಹ ಹೆಚ್ಚಳ ಮಾಡಲಾಗಿದೆ. ಬೆಂಗಳೂರಿನಿಂದ ಚೆನ್ನೈಗೆ ಹೋಗಬೇಕಾದರೆ ದುಪ್ಪಟ ಹಣವನ್ನು ನೀಡಬೇಕಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಹಣವನ್ನು ಕಟ್ಟಿ ನಾವು ಈ ಹಣವನ್ನು ಗ್ರಾಹಕರಿಂದ ಭರಿಸಲು ಸಾಧ್ಯವಾಗುತ್ತಿಲ್ಲ. ನಮ್ಮ ಕಷ್ಟವನ್ನು ಸರ್ಕಾರಕ್ಕೆ ಹೇಳಿದ್ದೇವೆ. ನಮ್ಮ ಬೇಡಿಕೆಗಳ ಪಟ್ಟಿಯನ್ನು ಸಹ ಸಲ್ಲಿಸಿದ್ದೇವೆ. ಸರ್ಕಾರ ಏರಿಕೆ ಮಾಡಿರುವ ತೆರಿಗೆಗಳನ್ನು ಕಡಿತಗೊಳಿಸಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಡೆಯುತ್ತಿದೆ ಎಂದು ಜಿಯಾವುಲ್ಲಾ ತಿಳಿಸಿದರು. ಪ್ರತಿಭಟನೆಯಲ್ಲಿ ಚಾಮರಾಜನಗರ ಲೋಕಲ್ ಲಾರಿ ಮಾಲೀಕರ ಸಂಘದ ಕಾರ್ಯದರ್ಶಿ ಇರ್ಷಾದ್ ಪಾಷಾ, ಪದಾಧಿಕಾರಿಗಳಾದ ಜುಬೇರ್‌ವುಲ್ಲಾ, ತಾಬರೇಸ್, ಗಾಳಿಪುರ ಮಹೇಶ್, ಎಂಎಸ್‌ಕೆ ಮಂಜು, ನಯಿಮಾವುಲ್ಲಾ, ಇಲಿಯಾಜ್ ಅಹಮದ್, ಉಬೇದ್‌ಖಾನ್ ಹಾಗೂ ಲಾರಿ ಚಾಲಕರು ಮತ್ತು ಮಾಲಿಕರು ಭಾಗವಹಿಸಿದ್ದರು.

Share this article