ಮುಂಡಗೋಡ: ಪಟ್ಟಣದಲ್ಲಿ ನಡೆದ ಗೋ ಹತ್ಯೆ ಖಂಡಿಸಿ ವಿವಿಧ ಹಿಂದೂ ಪರ ಸಂಘಟನೆ ಹಾಗೂ ಎಬಿವಿಪಿ ಕಾರ್ಯಕರ್ತರು ಗುರುವಾರ ಪಟ್ಟಣದ ಶಿವಾಜಿ ಸರ್ಕಲ್‌ನಲ್ಲಿ ಶಿರಸಿ-ಹುಬ್ಬಳ್ಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಬಳಿಕ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿಪಿಐ ರಂಗನಾಥ ನೀಲಮ್ಮನವರ ತಕ್ಷಣ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಹಿಂದೂ ಜಾಗರಣ ವೇದಿಕೆ ಸಂಚಾಲಕ ಪ್ರಕಾಶ ಬಡಿಗೇರ, ಸಹ ಸಂಚಾಲಕ ವಿಶ್ವನಾಥ ನಾಯರ, ವಿಎಚ್‌ಪಿಯ ತಂಗಮ್ ಚಿನ್ನನ್, ಬಜರಂಗ ದಳ ತಾಲೂಕಾಧ್ಯಕ್ಷ ಶಂಕರ ಲಮಾಣಿ, ಅಯ್ಯಪ್ಪ ಬಜಂತ್ರಿ, ಮಂಜುನಾಥ ಎಚ್.ಎಫ್., ಶ್ರೀಧರ ಉಪ್ಪಾರ, ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ, ಪಪಂ ಸದಸ್ಯ ಫಣಿರಾರ ಹದಳಗಿ, ಭರತರಾಜ ಹದಳಗಿ, ಮಂಜುನಾಥ ಶೇಟ್, ನಾಗರಾಜ ಹದಳಗಿ ಮುಂತಾದವರು ಉಪಸ್ಥಿತರಿದ್ದರು.ಓರ್ವ ಆರೋಪಿ ಬಂಧನ: ಪಟ್ಟಣದ ಯಲ್ಲಾಪುರ ರಸ್ತೆಯ ದರ್ಗಾ ಬಳಿ ಗುರುವಾರ ಬೆಳಗ್ಗೆ ಗೋವಧೆ ಮಾಡಲಾಗಿತ್ತು. ಈ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿಯ ಮೇರೆಗೆ ಮುಂಡಗೋಡ ಪೊಲೀಸರು ದಾಳಿ ನಡೆಸಿದ್ದಾರೆ. ಬಳಿಕ ಮಾಂಸವನ್ನು ವಶಪಡಿಸಿಕೊಂಡು ಓರ್ವನನ್ನು ಬಂದಿಸಿದ್ದಾರೆ. ಜಹಾಂಗೀರ ಬೇಪಾರಿ ಬಂಧಿತ ಆರೋಪಿ.