ಚನ್ನರಾಯಪಟ್ಟಣ: ತಾಲೂಕಿನ ಶ್ರವಣಬೆಳಗೊಳ ಹೋಬಳಿ ಹಡೇನಹಳ್ಳಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಮಹಿಳಾ ಸಂಘದ ಕಾರ್ಯದರ್ಶಿಯಿಂದ ಲಕ್ಷಾಂತರ ಹಣ ದುರ್ಬಳಕೆ ಆರೋಪ ಹಾಗೂ ಹಾಲು ಸ್ವೀಕರಿಸಲು ಅಧಿಕಾರಿಗಳ ನಿರಾಕರಣೆ ಹಿನ್ನಲೆಯಲ್ಲಿ ರೊಚ್ಚಿಗೆದ್ದ ಹಾಲು ಉತ್ಪಾದಕರು ಶನಿವಾರ ತಾಲೂಕು ಕಚೇರಿ ಎದುರು ಸಾವಿರಾರು ಲೀಟರ್ ಹಾಲು ಚೆಲ್ಲಿ ಪ್ರತಿಭಟನೆ ನಡೆಸಿದರು.
ನೂತನ ಕಮಿಟಿ ಅಸ್ತಿತ್ವ: ಕಳೆದ ಎರಡು ತಿಂಗಳ ಹಿಂದೆ ಸಂಘಕ್ಕೆ ನೂತನ ಕಮಿಟಿ ರಚನೆಯಾಗಿತ್ತು, ನೂತನ ಕಮಿಟಿಗೆ ಹಿಂದಿನ ಕಾರ್ಯದರ್ಶಿ ಜಯಂತಿ ಲೆಕಪತ್ರ ನೀಡದೇ ದಿನ ತಳ್ಳುತ್ತಾ ಬಂದಿದ್ದರು, ಆಗ ನೂತನ ಕಮಿಟಿಯ ನಿರ್ದೇಶಕರುಗಳು ಸಭೆ ಸೇರಿ ಜಯಂತಿ ಲೆಕ್ಕ ಕೊಡುವವರೆಗೂ ಹಾಲು ಅಳೆಸುವುದು ಬೇಡ ಎಂದು ಸಭೆ ಸೇರಿ ತೀರ್ಮಾನ ಕೈಗೊಂಡು, ಹಾಲು ಉತ್ಪಾದಕರು ಕಳೆದ ಎರಡು ದಿನಗಳಿಂದ ಪ್ರಧಾನ ಡೈರಿಗೆ ನೇರವಾಗಿ ಹಾಲು ಕಳುಹಿಸುತ್ತಿದ್ದರು. ಈ ಮಧ್ಯೆ ಕಾರ್ಯದರ್ಶಿಯಿಲ್ಲದೇ ಉತ್ಪಾದಕರ ದಾಖಲಾತಿಗಳನ್ನು ನಿರ್ವಹಿಸುವುದು ಕಷ್ಟವೆಂದು ತಾತ್ಕಲಿಕವಾಗಿ ರೈತರಿಂದ ಹಾಲು ಶೇಖರಣೆ ಮಾಡುವುದನ್ನು ನಿರ್ಬಂಧಿಸಿ, ಸಂಘದಲ್ಲಿ ಉಂಟಾಗಿರುವ ಗೊಂದಲಗಳು ನಿವಾರಣೆಯಾಗುವರೆಗೂ ಪಕ್ಕದ ಡೇರಿಗೆ ಹಾಲು ಹಾಕುವ ಆದೇಶವನ್ನು ಪ್ರಧಾನ ಡೈರಿ ಮೇಲ್ವಿಚಾರಕರು ಮಾಡಿ, ಹಾಲು ಶೇಖರಣೆ ಶುಕ್ರವಾರದಿಂದ ಸ್ಥಗಿತಗೊಳಿಸಲಾಗಿದೆ.
ಇದರಿಂದ ಆಕ್ರೋಶಗೊಂಡ ಹಾಲು ಉತ್ಪಾದಕರು, ಮತ್ತು ಷೇರುದಾರರು ತಹಶೀಲ್ದಾರ್ ಕಚೇರಿ ಮುಂದೆ ಜಮಾಯಿಸಿ ತಮ್ಮ ಬೇಡಿಕೆಗಳ ಪರಿಹಾರಕ್ಕೆ ಒತ್ತಾಯಿಸಿ ಹಾಲಿನ ಕ್ಯಾನ್‌ಗಳೊಂದಿಗೆ ಧರಣೆಗೆ ಮುಂದಾಗಿ ಹಾಮೂಲು ಅಧಿಕಾರಿಗಳು, ಶಾಸಕರು, ಮತ್ತು ಹಿಂದಿನ ಕಾರ್ಯದರ್ಶಿ ಜಯಂತಿ ವಿರುದ್ಧ ಘೋಷಣೆಗಳನ್ನು ಕೂಗಿ, ಹಾಮೂಲು ಎಂ.ಡಿ. ಸ್ಥಳಕ್ಕೆ ಬಂದು ನಮ್ಮ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆ ಆರಂಭಿಸಿ ಒಂದು ಘಂಟೆಯಾದರೂ ಅಧಿಕಾರಿಗಳಿಂದ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ತಾಲೂಕು ಕಚೇರಿ ಮುಂಭಾಗ ತಂದಿದ್ದ ಸಾವಿರಾರು ಲೀಟರ್ ಹಾಲನ್ನು ನೆಲಕ್ಕೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ತಹಸೀಲ್ದಾರ್ ಗೋವಿಂದ್‌ರಾಜ್ ಪ್ರತಿಭಟನಕಾರರ ಬೇಡಿಕೆ ಪೂರೈಸುವ ಭರವಸೆ ನೀಡಿದರಾದರೂ ಪ್ರತಿಭಟನಕಾರರು ಪಟ್ಟು ಸಡಿಸಲಿಲ್ಲ, ಹಾಮೂಲ ಅಧಿಕಾರಿಗಳೇ ಸ್ಥಳಕ್ಕೆ ಬರಬೇಕೆಂದು ಆಗ್ರಹದ ಹಿನ್ನೆಲೆಯಲ್ಲಿ ವ್ಯವಸ್ಥಾಪಕ ರೂಪೇಶ್‌ಕುಮಾರ್, ಅಸಿಸ್ಟೆಂಟ್ ರಿಜಿಸ್ಟ್ರಾರ್ ಬಾಲಚಂದ್ರ, ಮತ್ತು ಸಿಡಿಓ ಸುನೀಲ್ ಆಗಮಿಸಿ ಪ್ರತಿಭಟನಕಾರರ ಸಮಸ್ಯೆ ಆಲಿಸಿದರು.
ಎಆರ್ ಬಾಲಚಂದ್ರ ಮಾತನಾಡಿ, ನೂತನ ಕಮಿಟಿಗೆ ಅಧಿಕಾರ ಹಸ್ತಾಂತರ ಆಗುವವರೆಗೂ ಡೇರಿ ನಿರ್ವಹಣೆಗಾಗಿ ತಾತ್ಕಲಿಕವಾಗಿ ಇಬ್ಬರ ಆಯ್ಕೆ ಮಾಡಿಕೊಂಡು ಹಾಲು ಶೇಖರಣೆ ಕಾರ್ಯ ನಡೆಸಿ, ಇನ್ನೂ ಹಳೇ ಕಾರ್ಯದರ್ಶಿ ವಿರುದ್ಧ ಅವ್ಯವಹಾರದ ಆರೋಪವನ್ನು ತಮಗೆ ಪತ್ರ ಮೂಲಕ ಸಲ್ಲಿಸಿ, ನೀವು ಕೇಳಿದ ತನಿಖಾಧಿಕಾರಿ ನೇಮಿಸಿ ಪರಿಶೀಲನೆ ಮಾಡಿಸುತ್ತೇವೆ. ೨೦ವರ್ಷಗಳ ಆಡಿಟ್ ವರದಿಯನ್ನು ತೆಗೆಸುವುದಾಗಿ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.