ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಭರತ್, ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ ವಸೂಲಿಗಾರ, ಡಾಟಾ ಎಂಟ್ರಿ ಆಪರೇಟರ್, ನೀರು ಗಂಟಿಗಳು, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು. ಪ್ರಸಕ್ತ ದಿನನಿತ್ಯದ ಬಳಕೆ ವಸ್ತುಗಳ ಮೇಲೆ ಬೆಲೆ ಏರಿಕೆಗೆ ಅನುಗುಣವಾಗಿ ಕನಿಷ್ಠ ವೇತನ 31 ಸಾವಿರ ರು. ನಿಗದಿಗೊಳಿಸಬೇಕು ಸೇರಿದಂತೆ ಸುಮಾರು 19 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಬೆಲೆಗಳು ಗಗನಕ್ಕೆ ಏರಿದೆ, ಈ ಮೂಲಕ ಸಾಮಾನ್ಯ ಕಾರ್ಮಿಕನ ಬದುಕು ಅತಂತ್ರವಾಗಿದೆ, ಕೂಲಿ ವೇತನ ಕನಿಷ್ಠ ದರದಲ್ಲಿ ಇದೆ. ಈ ಬಗ್ಗೆ ಸರ್ಕಾರಗಳು ತಲೆಕೆಡಿಸಿಕೊಳ್ಳುತ್ತಿಲ್ಲ, ಸರ್ಕಾರದಲ್ಲಿ ಪಕ್ಷ ಬದಲಾವಣೆಯಾಗುತ್ತಿದೆಯೇ ಹೊರತು ಕಾರ್ಮಿಕ ನೀತಿಗಳು ಬದಲಾಗುತ್ತಿಲ್ಲ ಎಂದು ಭರತ್ ಆರೋಪಿಸಿದರು.ಕೇವಲ ಪತ್ರಿಕಾ ಪ್ರಚಾರಕ್ಕೆ ಮಾತ್ರ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದ ಅವರು, ವೇತನ ತಾರತಮ್ಯ ಎದ್ದು ಕಾಣುತ್ತಿದೆ. ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜು.23ಕ್ಕೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಮುಖರಾದ ಎಂ ಎ ಅಮೀರ್, ರಂಗಸ್ವಾಮಿ, ಎಚ್.ಆರ್. ಮಂಜು ಇದ್ದರು.