ಹಗರಿಬೊಮ್ಮನಹಳ್ಳಿ: ಕಳೆದ ೩೦ ವರ್ಷಗಳಿಂದ ಮನೆ ತೆರಿಗೆ ಪಾವತಿಸಿ ವಾಸವಾಗಿರುವ ಕುಟುಂಬಗಳಿಗೆ ಮನೆಯ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ತಾಲೂಕಿನ ೬ ಗ್ರಾಮಗಳ ಹಕ್ಕುಪತ್ರ ವಂಚಿತ ಸಂತ್ರಸ್ಥರು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕೋಸ್)ಯ ನೇತೃತ್ವದಲ್ಲಿ ತಾಪಂ ಕಾರ್ಯಾಲಯದ ಬಳಿ ಬುಧವಾರ ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಈ ಹಿಂದೆ ಸರ್ಕಾರ ಒದಗಿಸಿರುವ ನಿವೇಶನದಲ್ಲಿ ವಸತಿ ಯೋಜನೆಯಡಿ ಮನೆಯ ಸೌಲಭ್ಯ ಪಡೆದವರು ಹಾಗೂ ನಿವೇಶನ ಹೊಂದಿದವರು ಮನೆ ಕಟ್ಟಿಕೊಂಡು ಆಯಾ ಗ್ರಾಪಂಗಳಿಗೆ ನಿರಂತರವಾಗಿ ಮನೆ ತೆರಿಗೆ ಪಾವತಿಸಿದ್ದರೂ ಸಂಬಂಧಿಸಿದ ಮನೆಯ ಹಕ್ಕು ಪತ್ರದಿಂದ ವಂಚಿತರಾಗಿದ್ದಾರೆ ಎಂದು ಖೇದ ವ್ಯಕ್ತಪಡಿಸಿದರು.
ಹಕ್ಕು ಪತ್ರಕ್ಕಾಗಿ ಸಂಬಂಧಿಸಿದ ಗ್ರಾಪಂಗಳಿಗೆ ಅಲೆದಾಡುವುದೇ ಸಂತ್ರಸ್ಥ ಕುಟುಂಬಗಳ ಕಾಯಕವಾಗಿದೆ. ಸಂತ್ರಸ್ಥ ಕುಟುಂಬಗಳ ಪಾಲಿಗೆ ಹಕ್ಕು ಪತ್ರ ಎನ್ನುವುದು ಕನ್ನಡಿಯೊಳಗಿನ ಗಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಎಲ್ಲ ನಿರ್ಗತಿಕರಿಗೆ ಮತ್ತು ಬಡ ವಸತಿ ಹೀನರಿಗೆ ನಿವೇಶನ ಮತ್ತು ಸರ್ಕಾರ ಒದಗಿಸಿರುವ ನಿವೇಶನದಲ್ಲಿ ಮನೆ ಕಟ್ಟಿಕೊಂಡವರಿಗೆ ಸಂಬಂಧಿಸಿದ ಹಕ್ಕುಪತ್ರ ನೀಡಬೇಕು ಎಂಬ ಸರ್ಕಾರದ ಆದೇಶ ಗ್ರಾಪಂ ಆಡಳಿತಾಧಿಕಾರಿಗಳು ಗಾಳಿಗೆ ತೂರಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಾಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಕೂಡಲೇ ಕಂದಾಯ ಇಲಾಖೆ ಮತ್ತು ಗ್ರಾಪಂ ಆಡಳಿತ ಜಂಟಿಯಾಗಿ ಸಮೀಕ್ಷೆ ನಡೆಸಿ ತಾಲೂಕಿನ ಹಳೇ ನೆಲ್ಕುದ್ರಿ ಗಾಮದ ೧೩ ಕುಟುಂಬಗಳಿಗೆ, ನೆಲ್ಕುದ್ರಿ -೨ ಗ್ರಾಮದ ೧೧ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಜತೆಗೆ ಸೊನ್ನ, ಗದ್ದಿಕೇರಿ, ಬ್ಯಾಸಿಗದೇರಿ ಮತ್ತು ವಲ್ಲಭಾಪುರ ಗ್ರಾಪಂ ವ್ಯಾಪ್ತಿಯ ಹಕ್ಕು ಪತ್ರ ವಂಚಿತರಿಗೆ ಕೂಡಲೇ ನ್ಯಾಯ ಒದಗಿಸಿ ನೆಮ್ಮದಿಯ ಬದುಕಿಗೆ ತಾಲೂಕು ಆಡಳಿತ ಮುಂದಾಗಬೇಕು ಎಂದು ಆಗ್ರಹಿಸಿ ತಾಪಂ ಇಓ ಪಿ.ಕೆ. ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು.