ಮುಗಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಂದ ಪ್ರತಿಭಟನೆ

KannadaprabhaNewsNetwork | Published : Mar 21, 2025 12:32 AM

ಸಾರಾಂಶ

ಅಜ್ಜಂಪುರ, ಸೌತನಹಳ್ಳಿ ಗೋಮಾಳದಲ್ಲಿ ಅಜ್ಜಂಪುರ ಪಟ್ಟಣ ಪಂಚಾಯಿತಿ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಬೇಕು ಎಂದು ತಾಲೂಕಿನ ಸೊಲ್ಲಾಪುರ, ಬೇಗೂರು, ಮುಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ವಿರೋಧ

ಕನ್ನಡಪ್ರಭ ವಾರ್ತೆ ಅಜ್ಜಂಪುರ

ಸೌತನಹಳ್ಳಿ ಗೋಮಾಳದಲ್ಲಿ ಅಜ್ಜಂಪುರ ಪಟ್ಟಣ ಪಂಚಾಯಿತಿ ನಿರ್ಮಿಸುತ್ತಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಬೇಕು ಎಂದು ತಾಲೂಕಿನ ಸೊಲ್ಲಾಪುರ, ಬೇಗೂರು, ಮುಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸ್ಥಳದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಮಾಜಿ ಶಾಸಕ ಎಸ್. ಎಂ. ನಾಗರಾಜ್ ಮಾತನಾಡಿ ಘಟಕ ನಿರ್ಮಾಣ ಸ್ಥಳ ಗೋಮಾಳ ಆಗಿದೆ. ಇದು ಸುತ್ತಲೂ ಹತ್ತಾರು ಗ್ರಾಮಗಳ ಸಾವಿರಾರು ಜಾನುವಾರುಗಳ ಮೇವಿಗೆ ಮೂಲವಾಗಿದೆ. ಘಟಕ ನಿರ್ಮಿಸಿದರೆ ಜಾನುವಾರುಗಳ ಮೇವಿಗೆ ಕುತ್ತು ಬರಲಿದೆ. ಹೈನುಗಾರಿಕೆ ನಡೆಸಿ ಜೀವನ ನಿರ್ವಹಿಸುತ್ತಿರುವ ಬಹುತೇಕರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಎಂ ಕೃಷ್ಣಮೂರ್ತಿ ಮಾತನಾಡಿ ಘಟಕ ನಿರ್ಮಾಣ ಭೂಮಿ ರಾಷ್ಟ್ರೀಯ ಹೆದ್ದಾರಿ 176ಕ್ಕೆ ಹೊಂದಿ ಕೊಂಡಿದ್ದು ಘಟಕದ 100 ಮೀ. ಅಂತರದಲ್ಲಿ ವೇದಾವತಿ ನದಿ ಪಾತ್ರವಿದೆ. ಘಟಕದಿಂದ ನೀರು ವಿಷಯುಕ್ತವಾದರೆ ಜಲಚರ ಗಳ ಜೀವಕ್ಕೆ ಸಂಚಕಾರ ಉಂಟಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮುಖಂಡ ತಿಪ್ಪೇಶಪ್ಪ ಮಾತನಾಡಿ ಘಟಕದ ರಾಸಾಯನಿಕ ತ್ಯಾಜ್ಯ ನೀರಿಗೆ ಸೇರ್ಪಡೆಯಾದರೆ ಈ ನೀರು ಪೂರೈಕೆಯಾಗುವ ಹೊಸದುರ್ಗ ಹಿರಿಯೂರು ತಾಲೂಕಿನ ಹಲವು ಗ್ರಾಮಗಳ ಜನವಾರುಗಳ ಆರೋಗ್ಯ ಹದಗೆಡಲಿದೆ. ಹಾಗಾಗಿ ಇಲ್ಲಿಂದ ಘಟಕ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾ ನಿರತರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರಿಸರ ಮತ್ತು ವನ್ಯಜೀವಿ ಸಚಿವ ಈಶ್ವರ್ ಕಂಡ್ರೆ ಜಿಲ್ಲಾಧಿಕಾರಿರಿಗೆ ತಲುಪಿಸುವಂತೆ ತಹಸೀಲ್ದಾರ್ ವಿನಾಯಕ ಸಾಗರ್ ಗೆ ಮನವಿ ನೀಡಿದರು. ಜಿಪಂ ಮಾಜಿ ಸದಸ್ಯ ಕೆ. ಆರ್. ಆನಂದಪ್ಪ ಶಂಭೈನೂರು ಆನಂದಪ್ಪ, ಮಧು, ಲಿಂಗ ಮೂರ್ತಿ, ಮಂಜುನಾಥ ಆಚಾರ್, ಗರಗದಹಳ್ಳಿ ಪ್ರತಾಪ್, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ್ ಇದ್ದರು.

-- ಬಾಕ್ಸ್--

ಜನ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು

ಘಟಕ ನಿರ್ಮಾಣದಿಂದಾಗುವ ದುಷ್ಪರಿಣಾಮವನ್ನು ಗಂಬೀರವಾಗಿ ಪರಿಗಣಿಸಬೇಕು. ಘಟಕ ನಿರ್ಮಾಣ ಸ್ಥಗಿತಗೊಳಿಸಿ ಸ್ಥಳಾಂತರಸಬೇಕು. ಜಿಲ್ಲಾಡಳಿತ ಜನ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದು ಗರಗದಹಳ್ಳಿ ಹೈಕೋರ್ಟ‍್ ವಕೀಲ ವಸಂತ್ ಕುಮಾರ್ ಹೇಳಿದರು.

ಸಾಣೆಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ಈ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ ಎಂದ ಅವರು ಈ ಕಾಮಗಾರಿಗೆ ಹೈಕೋರ್ಟ‍್ ನಿಂದ ತಡೆಯಾಜ್ಞೆ ತರಲಾಗುವುದು ಎಂದು ತಿಳಿಸಿದರು.

Share this article