ನ್ಯಾ.ನಾಗಮೋಹನ್ ದಾಸ್ ವರದಿ ಜಾರಿಗೆ ಆಗ್ರಹಿಸಿ ಹೋರಾಟ ಸಮಿತಿ ಪ್ರತಿಭಟನೆ

KannadaprabhaNewsNetwork |  
Published : Mar 27, 2026, 02:00 AM IST
ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ  ಜಿಲ್ಲಾ ಮಾದಿಗ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ  ಬಳ್ಳಾರಿಯ ಡಿಸಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.  | Kannada Prabha

ಸಾರಾಂಶ

ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಬಳ್ಳಾರಿ: ನ್ಯಾ.ನಾಗಮೋಹನ್ ದಾಸ್ ವರದಿಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಮಾದಿಗ ಒಳ ಮೀಸಲಾತಿ ಜಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಭಾರತದ ಹಲವಾರು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಸಂವಿಧಾನಬದ್ಧವಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ದಶಕಗಳಿಂದ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯದ ಪಾಲು ನೀಡದೆ ಮೋಸ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ ಪಡೆದಿದೆ. ಮಾದಿಗ ಸಮುದಾಯದ 35 ವರ್ಷಗಳ ಹೋರಾಟಕ್ಕೆ ದೊರೆತ ಐತಿಹಾಸಿಕ ನ್ಯಾಯವಾಗಿದೆ. ಆದರೆ, ಒಳ ಮೀಸಲಾತಿಯಲ್ಲಿ ನ್ಯಾಯ ನೀಡದೆ ಮೋಸ ಮಾಡಲಾಗುತ್ತಿದ್ದು ಸರ್ಕಾರ ತಕ್ಷಣ ಸಚಿವ ಸಂಪುಟದ ವಿಶೇಷ ಸಭೆ ಕರೆದು ಒಳಮಿಸಲಾತಿ ಬೇಡುತ್ತಿರುವ ಮಾದಿಗ ಸಂಬಂಧಿ ಜಾತಿಗಳಿಗೆ ಸುಪ್ರೀಂ ಕೋರ್ಟ್ ತೀರ್ಪಿನ ಆಧಾರದ ಮೇಲೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯ ಅಥವಾ ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗದ ಶಿಫಾರಸಿನ ಅನ್ವಯ ಮೀಸಲಾತಿ ಒದಗಿಸಬೇಕು. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಎಲ್ಲ ಕ್ಷೇತ್ರಗಳಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಯ ಮಕ್ಕಳಿಗೆ ವರ್ಗೀಕರಣದ ಅನುಪಾತದಲ್ಲಿ ಒಳ ಮೀಸಲಾತಿ ಸೌಲಭ್ಯ ನೀಡಬೇಕು. ಸಂವಿಧಾನದ ಅನುಚ್ಛೇದ 16(4) ರಂತೆ ಉದ್ಯೋಗ ಮೀಸಲಾತಿ ಎಂದರೆ ನೇರ ನೇಮಕಾತಿ, ಬಡ್ತಿ, ನೇಮಕಾತಿ ಮತ್ತು ಮುಂಬಡ್ತಿ, ಬ್ಯಾಕ್‍ಲಾಗ್ ನೇಮಕಾತಿಗಳನ್ನು ಒಳಗೊಂಡಿದೆ. ಆದ್ದರಿಂದ ಎಲ್ಲ ಬಗೆಯ ನೇಮಕಾತಿಗಳನ್ನು ಆದಷ್ಟು ಬೇಗ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹೋರಾಟ ಸಮಿತಿಯ ಜಿಲ್ಲಾ ಪ್ರಮುಖರು, ಬ್ಯಾಕ್‌ಲಾಗ್ ಹಾಗೂ ಸರ್ಕಾರಿ ಗುತ್ತಿಗೆ ಸೇರಿದಂತೆ ಎಲ್ಲ ರಂಗಗಳಲ್ಲಿ ಮೀಸಲಾತಿ ಜಾರಿ ಮಾಡಬೇಕು. ಒಳ ಮೀಸಲಾತಿ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಸಮಿತಿಯ ಜಿಲ್ಲಾ ಸಂಚಾಲಕರಾದ ಕೆ.ವೆಂಕಟೇಶ ಮೂರ್ತಿ, ಎ.ಈಶ್ವರಪ್ಪ, ಟಿ.ಪಂಪಾಪತಿ, ಕೆ.ಎಂ.ಜಯಗೋಪಾಲ್, ಎ.ಕೆ.ಗಂಗಾಧರ, ರಾಮಣ್ಣ, ಡಿ.ಭೀಮದಾಸ್, ತಿಮ್ಮಪ್ಪ, ರಮೇಶ್ ಗೋನಾಳ್, ಸಿದ್ದಮ್ಮನಹಳ್ಳಿ ಸುರೇಶ್, ಎಚ್.ದಾನಪ್ಪ, ಜೆ.ಮಲ್ಲಿಕಾರ್ಜುನ, ತಾಯಣ್ಣ ಚೇಳ್ಳಗುರ್ಕಿ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ಶಾಲೆಗೆ ಸ್ವಂತ ಭೂಮಿ/ 15 ವರ್ಷ ಭೂ ಗುತ್ತಿಗೆ ಕಡ್ಡಾಯ
ಲ್ಯಾಂಬೋರ್ಗಿನಿ ಗಿರಿಗಿಟ್ಲೆ:ಮುತ್ತಪ್ಪರೈ ಪುತ್ರನ ವಿರುದ್ಧ ಮತ್ತೊಂದು ಕೇಸ್