ಹಿಂದೂ ಜಾತಿಗಳ ಮಧ್ಯೆ ಕ್ರೈಸ್ತರ ನುಗ್ಗಿಸುವ ಹುನ್ನಾರ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Sep 21, 2025, 02:02 AM IST
ಪೋಟೊ-೨೦ ಎಸ್.ಎಚ್.ಟಿ. ೧ಕೆ- ಜಾತಿ ಜನಗಣತಿ ಸಮೀಕ್ಷೆ ಮೂಲಕ ಮತಾಂತರಕ್ಕೆ ಮುಂದಾದ ಸರ್ಕಾರದ ಕ್ರಮ ಖಂಡಿಸಿ ಹಿಂದೂಪರ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಶೈಕ್ಷಣಿಕ, ಸಾಮಾಜಿಕ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವ ಹುನ್ನಾರ ರಾಜ್ಯ ಸರ್ಕಾರ ನಡೆಸಿದೆ ಎಂದು ಆರೋಪಿಸಿ ಪಟ್ಟಣದ ಮಾರುತಿ ದೇವಸ್ಥಾನದಿಂದ ಹಿಂದೂಪರ ಸಂಘಟನೆಗಳ ಒಕ್ಕೂಟ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ಶಿರಹಟ್ಟಿ: ಶೈಕ್ಷಣಿಕ, ಸಾಮಾಜಿಕ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಹಿಂದೂ ಜಾತಿಗಳ ನಡುವೆ ಕ್ರೈಸ್ತರನ್ನು ನುಗ್ಗಿಸುವ ಹುನ್ನಾರ ರಾಜ್ಯ ಸರ್ಕಾರ ನಡೆಸಿದೆ ಎಂದು ಆರೋಪಿಸಿ ಪಟ್ಟಣದ ಮಾರುತಿ ದೇವಸ್ಥಾನದಿಂದ ಹಿಂದೂಪರ ಸಂಘಟನೆಗಳ ಒಕ್ಕೂಟ ತಾಲೂಕು ಘಟಕದ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.

ಈ ವೇಳೆ ಮಾತನಾಡಿದ ಶಾಸಕ ಡಾ. ಚಂದ್ರು ಕೆ. ಲಮಾಣಿ ಅವರು, ರಾಜ್ಯ ಸರ್ಕಾರ ಸೆ. ೨೨ರಿಂದ ಜಾತಿ ಸಮೀಕ್ಷೆ ಕಾರ್ಯ ಕೈಗೊಳ್ಳಲು ಮುಂದಾಗಿದ್ದು, ಈಗಾಗಲೇ ಹಲವು ಗೊಂದಲಗಳು ಮತ್ತು ವಿವಾದಗಳು ಸೃಷಿಯಾಗಿವೆ. ಸರ್ಕಾರದಿಂದ ಹೊಸ ಉಪಜಾತಿಗಳ ಸೃಷ್ಟಿಯಿಂದ ಜಾತಿ ಜಟಾಪಟಿ ಆರಂಭವಾಗಿದ್ದು, ಎಲ್ಲೆಡೆ ಆಕ್ರೋಶ ಭುಗಿಲೆದ್ದಿದೆ. ಜಾತಿ ಜನಗಣತಿ ಮುಂದೂಡುವಂತೆ ಒತ್ತಾಯಿಸಿದರು.

ಹಿಂದೂ ಜಾತಿಗಳನ್ನು ಒಡೆಯುವ ಷಡ್ಯಂತ್ರವನ್ನು ಸರ್ಕಾರ ಮಾಡುತ್ತಿದೆ. ಹಿಂದೂಗಳಿಗೆ ಮತಾಂತರಕ್ಕೆ ಕುಮ್ಮಕ್ಕು ನೀಡಿ ದುರ್ಬಲಗೊಳಿಸುವ ವ್ಯವಸ್ಥಿತ ಸಂಚು ನಡೆದಿದೆ. ತಕ್ಷಣ ಕ್ರೈಸ್ತ ಎಂಬ ಜಾತಿ ಪದವನ್ನು ಕಾಲಂನಿಂದ ತೆಗೆದು ಹಾಕಬೇಕು. ಸರ್ಕಾರ ತರಾತುರಿಯಲ್ಲಿ ಈ ಕಾರ್ಯಕ್ಕೆ ಮುಂದಾಗಿರುವುದು ಸರಿಯಲ್ಲ. ೧೫೦೦ ಉಪಜಾತಿಗಳಿಗೂ ಪ್ರತ್ಯೇಕ ಅಸ್ತಿತ್ವ ನೀಡಲು ಹೊರಟಿರುವುದನ್ನು ಕೈಬಿಡಬೇಕು. ಜಾತಿ ಗಣತಿ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರವಿದೆ. ರಾಜ್ಯ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಆಡಳಿತ ಪಕ್ಷದ ಸಚಿವರಿಂದಲೇ ತೀವ್ರ ವಿರೋಧ: ಜಾತಿಗಣತಿ ನಡೆಸುವ ಬಗ್ಗೆ ಸರ್ಕಾರದ ಕೈಪಿಡಿ ಪಟ್ಟಿಯಲ್ಲಿರುವ ಕೆಲ ಜಾತಿಗಳ ಬಗ್ಗೆ ಆಡಳಿತ ಪಕ್ಷದ ಸಚಿವರಿಂದಲೇ ತೀವ್ರ ವಿರೋಧ, ಆಕ್ಷೇಪ ವ್ಯಕ್ತವಾಗಿದೆ. ಕೆಲ ಜಾತಿಗಳ ಮುಂದೆ ಕ್ರಿಶ್ಚಿಯನ್ ಅಂತಾ ನಮೂದಿಸಲಾಗಿದೆ. ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಜಂಗಮ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಅಂತಾ ಉಲ್ಲೇಖವಿದೆ. ಈ ಪಟ್ಟಿಯೇ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದು, ಮುಖ್ಯಮಂತ್ರಿ ಸಿದ್ದರಾಯ್ಯನವರು ಗೊಂದಲಕ್ಕೆ ತೆರೆ ಎಳೆಯಬೇಕು ಎಂದು ಒತ್ತಾಯಿಸಿದರು.ಜಾತಿ ಜನಗಣತಿ ಸಮೀಕ್ಷೆಯನ್ನು ಕೈಬಿಡಬೇಕು ಅಥವಾ ಮುಂದೂಡಬೇಕು ಎಂದು ಒತ್ತಾಯಿಸಿದ ಅವರು, ಎಲ್ಲ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಕ್ರಮ ಕೈಗೊಳ್ಳಬೇಕು. ಸಣ್ಣ ಸಣ್ಣ ಹಿಂದೂ ಜಾತಿಗಳನ್ನು ಒಡೆದು ಹಿಂದೂಗಳ ಮಧ್ಯೆ ದೊಡ್ಡ ಗೊಂದಲ ನಿರ್ಮಾಣಕ್ಕೆ ಸರ್ಕಾರ ಹೊರಟಿದೆ. ನೀವೇ ರಚನೆ ಮಾಡಿದ ಕಾಂತರಾಜು ಆಯೋಗದ ವ್ಯವಸ್ಥೆಯನ್ನು ಮೂಲೆಗುಂಪು ಮಾಡಿದ್ದೀರಿ. ಈಗ ಮತ್ತೆ ಜಾತಿ ಸಮೀಕ್ಷೆಗೆ ಹೊರಟಿರುವುದು ನಿಮ್ಮ ಸರ್ಕಾರದಲ್ಲೇ ಅದಕ್ಕೆ ಸಹಮತವಿಲ್ಲ ಎಂಬುದು ಸಾಬೀತಾಗಿದೆ ಎಂದು ಕಿಡಿ ಕಾರಿದರು. ಹಿಂದೂ ಸಂಘಟನೆ ಮುಖಂಡರಾದ ರಾಜು ಖಾನಪ್ಪನವರ, ಸಂತೋಷ ಕುರಿ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂಗಳ ದೇವಾಲಯಗಳಿಗೆ ಮತ್ತು ಹಿಂದೂಗಳಿಗೆ ರಕ್ಷಣೆ ನಿಡುತ್ತಿಲ್ಲ. ಸಾಮಾಜಿಕ, ಶೈಕ್ಷಣಿಕ ಅಂಕಿ ಸಂಖ್ಯೆ ಗುರುತಿಸುವ ನೆಪದಲ್ಲಿ ಜಾತಿ ಜಾತಿಗಳ ಮಧ್ಯೆ ಕಂದಕ ಸೃಷ್ಟಿಮಾಡಿದೆ ಎಂದು ದೂರಿದರು. ರಾಜ್ಯದಲ್ಲಿ ಜಾತಿವಾದಿ ಮಠಗಳಿವೆ. ಹಿಂದೂ ಧರ್ಮಕ್ಕೆ ಅನ್ಯಾಯವಾಗುತ್ತಿದ್ದರೂ ಯಾವೊಬ್ಬ ಮಠಾಧೀಶರು ಧರ್ಮ ರಕ್ಷಣೆಗಾಗಿ ಹೋರಾಟಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು. ಹಿಂದೂ ಧರ್ಮ ರಕ್ಷಣೆಗೆ ಎಲ್ಲರೂ ಒಂದಾಗುವುದು ಅನಿವಾರ್ಯ ಎಂದು ಕರೆ ಕೊಟ್ಟರು.ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕನ್ನಡಪರ ಸಂಘಟನೆಗಳ ಹೋರಾಟಗಾರರ ಮೇಲೆ ಪದೇ ಪದೇ ಪ್ರಕರಣಗಳನ್ನು ದಾಖಲಿಸುತ್ತಿರುವುದು ಅಕ್ಷಮ್ಯ ಅಪರಾಧ. ಹಿಂದೂಗಳ ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸಿ ಕೇಸ್‌ಗಳನ್ನು ದಾಖಲಿಸುತ್ತಿರುವುದು ಹಿಂದೂ ವಿರೋಧಿ ನೀತಿಯಾಗಿದೆ. ತಕ್ಷಣದ ಹಿಂದೂಪರ ಹೋರಾಟಗಾರರ ಕೇಸ್‌ಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಶಿವಪ್ರಕಾಶ ಮಹಾಜನಶೆಟ್ಟರ, ಪ್ರವೀಣಗೌಡ ಪಾಟೀಲ, ನಂದಾ ಪಲ್ಲೇದ, ನಾಗರಾಜ ಲಕ್ಕುಂಡಿ, ಸಂತೋಷ ಓಬಾಜಿ, ಶಂಕರ ಮರಾಠೆ ಮಾತನಾಡಿದರು. ಚಂದ್ರಕಾಂತ ನೂರಶೆಟ್ಟರ, ಫಕ್ಕೀರೇಶ ರಟ್ಟಿಹಳ್ಳಿ, ರಾಮಣ್ಣ ಕಂಬಳಿ, ಯಲ್ಲಪ್ಪ ಇಂಗಳಗಿ, ಸಂದೀಪ ಕಪ್ಪತ್ತನವರ, ರಾಜೀವರಡ್ಡಿ ಬಮ್ಮನಕಟ್ಟಿ, ಬಸವರಾಜ ತುಳಿ, ವೀರಣ್ಣ ಅಂಗಡಿ, ರಶುರಾಮ ಡೊಂಕಬಳ್ಳಿ, ಶಿದ್ದು ಪೂಜಾರ, ಅರುಣ ತಿರ್ಲಾಪೂರ, ಶರಣಪ್ಪ ಹರ್ಲಾಪೂರ ಇತರರು ಇದ್ದರು. ನಂತರ ತಹಸೀಲ್ದಾರ ಕೆ. ರಾಘವೇಂದ್ರರಾವ್ ಅವರಿಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ
ಜ.6 ಇಲ್ಲವೇ 9ಕ್ಕೆ ಡಿಕೆಶಿ ಸಿಎಂ 200% ಕನ್ಫರ್ಮ್: ಇಕ್ಬಾಲ್