ಕಾರ್ಖಾನೆಯ ನಿಯಮ ಉಲ್ಲಂಘನೆ ಖಂಡಿಸಿ ಪ್ರತಿಭಟನೆ

KannadaprabhaNewsNetwork |  
Published : Jun 06, 2025, 03:07 AM IST
ಚಿತ್ರ: ೪ಎಸ್.ಎನ್.ಡಿ.೦೭- ದಲಿತ ಸಂಘರ್ಷ ಸಮಿತಿ ಮುಖಂಡರು ಸಂಡೂರು ತಾಲೂಕಿನ ಚಿಕ್ಕ ಅಂತಾಪುರದಲ್ಲಿನ ಪದ್ಮಾವತಿ ಕಾರ್ಖಾನೆಯ ಏ-೧ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನ ಚಿಕ್ಕ ಅಂತಾಪುರದಲ್ಲಿರುವ ಪದ್ಮಾವತಿ ಕಾರ್ಖಾನೆಯ ಭಾಗವಾದ ಏ-೧ ಕಾರ್ಖಾನೆಯ ನಿಯಮ ಉಲ್ಲಂಘನೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ದೊಡ್ಡ ಅಂತಾಪುರ ಗ್ರಾಮ ಶಾಖೆ ಮತ್ತು ತಾಲೂಕು ಸಮಿತಿಯ ಮುಖಂಡರು ಬುಧವಾರ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು.

ಕಾರ್ಖಾನೆ ವಿಪರೀತ ಧೂಳು, ವಿಷಮ ಗಾಳಿ ಉಗುಳುತ್ತಿದೆ । ಕಾನೂನು ಕ್ರಮಕ್ಕೆ ಆಗ್ರಹ, ತಹಶೀಲ್ದಾರ್‌ಗೆ ಮನವಿ

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ಚಿಕ್ಕ ಅಂತಾಪುರದಲ್ಲಿರುವ ಪದ್ಮಾವತಿ ಕಾರ್ಖಾನೆಯ ಭಾಗವಾದ ಏ-೧ ಕಾರ್ಖಾನೆಯ ನಿಯಮ ಉಲ್ಲಂಘನೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ದೊಡ್ಡ ಅಂತಾಪುರ ಗ್ರಾಮ ಶಾಖೆ ಮತ್ತು ತಾಲೂಕು ಸಮಿತಿಯ ಮುಖಂಡರು ಬುಧವಾರ ಕಾರ್ಖಾನೆಯ ಮುಂದೆ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಅವರಿಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿ, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಕಾರ್ಖಾನೆಯು ನಿಯಮ ಉಲ್ಲಂಘಿಸಿ ನಡೆಯುತ್ತಿದೆ. ಈ ಕಾರ್ಖಾನೆಯು ವಾಯುಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮ ಮೀರಿ ನಡೆಯುತ್ತಿದೆ. ಈ ಕಾರ್ಖಾನೆಯು ವಿಪರೀತ ಧೂಳು ಮತ್ತು ವಿಷಮ ಗಾಳಿ ಉಗಳುತ್ತಿದೆ. ಇದರಿಂದ ಸುತ್ತಲಿನ ಗ್ರಾಮಗಳ ಜನರ ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಬೆಳೆ ನಷ್ಟ ಉಂಟಾಗುತ್ತಿದೆ. ಕಾರ್ಖಾನೆ ಸ್ಥಾಪನೆಯಾಗಿ ೨೫-೩೦ ವರ್ಷಗಳಾಗಿದ್ದರೂ, ಕಾರ್ಖಾನೆ ನಿಯಮದಂತೆ ಇದುವರೆಗೂ ಯಾವುದೇ ಒಂದು ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿಲ್ಲ. ಸ್ಥಳೀಯ ನಿರುದ್ಯೋಗಿ ವಿದ್ಯಾವಂತರಿಗೆ, ಬಡ ದಲಿತ ಕುಟುಂಬದ ಯುವಕರಿಗೆ ಉದ್ಯೋಗ ಕಲ್ಪಿಸಿರುವುದಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಹಕ್ಕೊತ್ತಾಯಗಳು:

ಅಕ್ರಮವಾಗಿ ಕಾರ್ಖಾನೆಗೆ ಬಳಕೆ ಮಾಡಿಕೊಳ್ಳುತ್ತಿರುವ ನೀರಿನ ಪೈಪ್‌ಲೈನ್ ಸ್ಥಗಿತಗೊಳಿಸಬೇಕು. ಅಕ್ರಮವಾಗಿ ಖಾಸಗಿ ಕಾರ್ಖಾನೆಗೆ ನೀರು ಮಾರಾಟ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಕಾರ್ಖಾನೆಯ ನಿಯಮದ ಪ್ರಕಾರ, ಸ್ಥಳೀಯ ನಿರುದ್ಯೋಗಿಗಳಿಗೆ ಕಾರ್ಖಾನೆಯಲ್ಲಿ ಉದ್ಯೋಗ ಕಲ್ಪಿಸಬೇಕು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಆರೋಗ್ಯ ಶಿಬಿರ ಏರ್ಪಡಿಸಬೇಕು.

ನಿಯಮ ಮೀರಿ ವಿಷಗಾಳಿ, ಧೂಳು ಹರಡದಂತೆ ಕ್ರಮಕೈಗೊಳ್ಳಬೇಕು. ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮದಂತೆ ಕಾರ್ಖಾನೆ ನಡೆಸಬೇಕು. ಕಾರ್ಖಾನೆಯ ಒಳಗೆ ಮತ್ತು ಹೊರಗೆ ಮತ್ತು ಕಾರ್ಖಾನೆಯವರು ಬಳಸುತ್ತಿರುವ ರಸ್ತೆಗೆ ಪ್ರತಿದಿನ ನೀರು ಸಿಂಪಡಣೆ ಮಾಡಿ ಧೂಳನ್ನು ತಡೆಗಟ್ಟಬೇಕು. ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಬೆಳೆ ನಷ್ಟ ವಿತರಿಸಬೇಕು ಮುಂತಾದವು ನಮ್ಮ ಹಕ್ಕೊತ್ತಾಯಗಳಾಗಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಚ್. ಹನುಮಂತರೆಡ್ಡಿ, ಸಂಘಟನಾ ಸಂಚಾಲಕರಾದ ಎಂ. ರಾಮಕೃಷ್ಣ ಹೆಗಡೆ, ಮಲ್ಲೇಶ್ ಕಮತೂರು, ಕುಮಾರ್ ವೈಟಿಜಿ, ಸುಬ್ಬಣ್ಣ, ಹೊಸಳ್ಳಿ ಗಂಗಪ್ಪ, ದೊಡ್ಡ ಅಂತಾಪುರದ ಗಂಗಾಧರ, ವಿಠಲಾಪುರ ಚೌಡಪ್ಪ, ದುರುಗಣ್ಣ, ಮರಿಸ್ವಾಮಿ, ಅಂಬೇಡ್ಕರ್ ಸಂಘದ ತಾಲೂಕು ಘಟಕದ ಅಧ್ಯಕ್ಷ ಎಂ. ಶಿವಲಿಂಗಪ್ಪ, ದಲಿತ ಸಂಘರ್ಷ ಸಮಿತಿ ನಗರ ಘಟಕದ ಸಂಚಾಲಕ ಗಣೇಶ್‌ಹೆಗಡೆ, ಬಸವರಾಜ ಬ್ರೂಸ್ಲಿ, ತಿಮ್ಮಪ್ಪ, ಭರ್ಮರೆಡ್ಡಿ, ನರಸಪ್ಪ ಭಾಗವಹಿಸಿದ್ದರು.

PREV

Recommended Stories

ಬಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಶ್ರೀಕಾಂತ ಸ್ಪರ್ಧೆ
ಮೂಡಲಗಿ ಬ್ಯಾಂಕ್‌ನ 3 ಶಾಖೆಗಳು ಪ್ರಗತಿ ಪಥದತ್ತ