ಸಿಗ್ನಲ್ ಫ್ರೀ ತಂದ ಯಡವಟ್ಟು; ನಿತ್ಯ ಅಪಘಾತಗಳ ಪೆಟ್ಟು!

KannadaprabhaNewsNetwork |  
Published : Jun 06, 2025, 02:48 AM ISTUpdated : Jun 06, 2025, 10:11 AM IST
ಅಪಘಾತ ವಲಯವಾಗಿ ಮಾರ್ಪಟ್ಟಿರುವ ಬಳ್ಳಾರಿ ಮೋತಿ ವೃತ್ತದ ಚಿತ್ರಣವಿದು.  | Kannada Prabha

ಸಾರಾಂಶ

ಸುಗಮ ಸಂಚಾರ ಉದ್ದೇಶದಿಂದ ನಗರದ ಮೋತಿ ವೃತ್ತದಲ್ಲಿನ ಅಳವಡಿಸಿರುವ ಮುಕ್ತ ಸಂಚಾರದಿಂದಾಗಿ (ಸಿಗ್ನಲ್ ಫ್ರೀ) ರಸ್ತೆ ಅಪಘಾತಗಳ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರು ಜೀವ ಹಿಡಿದುಕೊಂಡೇ ವಾಹನ ಚಲಾಯಿಸುವಂತಾಗಿದೆ.

 ಮಂಜುನಾಥ ಕೆ.ಎಂ.

 ಬಳ್ಳಾರಿ : ಸುಗಮ ಸಂಚಾರ ಉದ್ದೇಶದಿಂದ ನಗರದ ಮೋತಿ ವೃತ್ತದಲ್ಲಿನ ಅಳವಡಿಸಿರುವ ಮುಕ್ತ ಸಂಚಾರದಿಂದಾಗಿ (ಸಿಗ್ನಲ್ ಫ್ರೀ) ರಸ್ತೆ ಅಪಘಾತಗಳ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರು ಜೀವ ಹಿಡಿದುಕೊಂಡೇ ವಾಹನ ಚಲಾಯಿಸುವಂತಾಗಿದೆ.

ಸಿಗ್ನಲ್ ಫ್ರೀ ವ್ಯವಸ್ಥೆಯಿಂದ ಜನರಿಗೆ ಅನುಕೂಲವಾಗುವ ಬದಲು ವಾಹನ ಸವಾರರ ಜೀವತೆಗೆಯುವ ಡೇಂಜರ್ ಸ್ಪಾಟ್ ಆಗಿ ಮೋತಿ ವೃತ್ತ ಬದಲಾಗಿದೆ. ಅಪಘಾತಗಳ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಸಂಚಾರಿ ಪೊಲೀಸ್ ಇಲಾಖೆಗೂ ಸಿಗ್ನಲ್ ಫ್ರೀ ವ್ಯವಸ್ಥೆ ನುಂಗದ ತುತ್ತಾಗಿ ಪರಿಣಮಿಸಿದೆ.

ಈ ಹಿಂದೆ ಮೋತಿ ವೃತ್ತದ ನಾಲ್ಕು ಕಡೆಯಿಂದ ಬರುವ ವಾಹನಗಳ ನಿಯಂತ್ರಿಸಲು ಸಿಗ್ನಲ್‌ ಅಳವಡಿಸಲಾಗಿತ್ತು. ಇದರಿಂದ ಅಪಘಾತಗಳ ಸಂಖ್ಯೆ ನಿಯಂತ್ರಣವಿತ್ತು. ಕಳೆದ 2017ರಲ್ಲಿ ಸಿಗ್ನಲ್ ಫ್ರೀ ವೃತ್ತವನ್ನಾಗಿಸಿದ ಬಳಿಕ ಅಪಘಾತಕ್ಕೆ ಆಹ್ವಾನ ಮಾಡಿಕೊಟ್ಟಂತಾಗಿದೆ. ಮೋತಿ ವೃತ್ತದಲ್ಲಿ ಅಪಘಾತ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತಕ್ಕೆ ಕಾಳಜಿ ಇಲ್ಲದಿರುವುದರಿಂದ ಅಮಾಯಕ ಜೀವಗಳು ಬಲಿಯಾಗಬೇಕಾಗಿದೆ.

 20ಕ್ಕೂ ಹೆಚ್ಚ ಸಾವು:

ಸಂಚಾರ ಪೊಲೀಸ್ ಮಾಹಿತಿ ಪ್ರಕಾರ ಬಳ್ಳಾರಿ ನಗರದಲ್ಲಿ ವರ್ಷದಲ್ಲಿ ಕನಿಷ್ಠ 20 ಜನರು ಅಪಘಾತದಿಂದಾಗಿಯೇ ಸಾವನ್ನಪ್ಪುತ್ತಾರೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ನಗರದಲ್ಲಿ 90ಕ್ಕೂ ಹೆಚ್ಚು ಜನರು ದುರ್ಮರಣ ಕಂಡಿದ್ದಾರೆ. ಈ ಪೈಕಿ ಮೋತಿ ವೃತ್ತ ಹಾಗೂ ಮೋತಿ ವೃತ್ತದಿಂದ ಏಳುಮಕ್ಕಳ ತಾಯಮ್ಮ ದೇವಸ್ಥಾನ ರಸ್ತೆಯಲ್ಲಿಯೇ ಹೆಚ್ಚಿನ ಜನರು ಸಾವಿಗೀಡಾಗಿದ್ದಾರೆ. ಈ ಎರಡು ಸ್ಥಳಗಳಲ್ಲಿ ಲೆಕ್ಕವಿಲ್ಲದಷ್ಟು ಜನರು ಗಾಯಗೊಂಡಿದ್ದಾರೆ. ಸಾವಿನ ಕಾರಣಗಳನ್ನು ಹುಡುಕುತ್ತಾ ಹೋದರೆ ಸಿಗ್ನಲ್ ಫ್ರೀ ಮಾಡಿರುವುದೇ ಇದಕ್ಕೆ ಪ್ರಮುಖ ಕಾರಣ ಎಂಬುದು ಗೊತ್ತಾಗುತ್ತದೆ.

ಅಪಘಾತ ನಿಯಂತ್ರಿಸಲು ಮೋತಿ ವೃತ್ತದಲ್ಲಿ ಮುಕ್ತ ಸಂಚಾರ ಬದಲು ಸಿಗ್ನಲ್ ಅಳವಡಿಸುವ ಕಾಳಜಿಗಳು ಈವರೆಗೆ ಕಂಡು ಬಂದಿಲ್ಲ ಎಂಬುದೇ ದುರಂತ.

 ಲಾರಿಗಳ ಆರ್ಭಟ:

ಬಿಸಿಲೂರು ಖ್ಯಾತಿಯ ಬಳ್ಳಾರಿ ಇತ್ತೀಚೆಗೆ ಅಪಘಾತಗಳ ನಗರವಾಗಿ ಬದಲಾಗುತ್ತಿದೆ. ಭಾರೀ ಗಾತ್ರದ ವಾಹನಗಳಿಗೆ ಕಡಿವಾಣ ಇಲ್ಲದಿರುವುದು ಹಾಗೂ ವಾಹನ ಸವಾರರು ಹೆಲ್ಮೆಟ್ ಬಳಕೆ ಮಾಡದಿರುವುದು ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ ಏರಿಕೆ ಕ್ರಮಾಂಕ ಕಂಡಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 11ರವರೆಗೆ ಭಾರೀ ವಾಹನಗಳ ಓಡಾಟಕ್ಕೆ ನಿಷೇಧವಿದೆ. ಆದರೆ, ಈ ನಿಯಮ ಪಾಲನೆಯಲ್ಲಿ ಕಂಡು ಬಂದಿಲ್ಲ. ಬೆಳಗ್ಗೆ 7 ಗಂಟೆವರೆಗೆ ವಾಹನ ಭರಾಟೆ ಮುಂದುವರಿದರೆ, ರಾತ್ರಿ 9.30ರ ಬಳಿಕ ಭಾರೀ ವಾಹನಗಳು ರಸ್ತೆಗಿಳಿಯುತ್ತವೆ. ಕೆಲ ರಾಜಕಾರಣಿಗಳ ಒತ್ತಡದಿಂದಾಗಿಯೇ ಲಾರಿ ಮತ್ತಿತರ ಭಾರೀ ವಾಹನಗಳ ಓಡಾಟಕ್ಕೆ ಕಡಿವಾಣ ಇಲ್ಲದಂತಾಗಿದೆ. ಒಂದೆಡೆ ರಸ್ತೆ ತುಂಬಾ ಗುಂಡಿಗಳು ವಾಹನ ಸವಾರರನ್ನು ಸಾವಿನ ದವಡೆಗೆ ತಳ್ಳಿದರೆ, ಮತ್ತೊಂದೆಡೆ ಭಾರೀ ಲಾರಿಗಳ ಓಡಾಟ ಸಾರ್ವಜನಿಕರಲ್ಲಿ ಜೀವ ನುಂಗುವ ಭೀತಿ ಮೂಡಿಸಿದೆ. 

ತೀವ್ರ ಅಪಘಾತ ವಲಯ:

ಮೋತಿ ವೃತ್ತದಿಂದ ಏಳುಮಕ್ಕಳ ತಾಯಮ್ಮ ದೇವಸ್ಥಾನವರೆಗಿನ ತೀವ್ರ ಅಪಘಾತ ವಲಯವಾಗಿದ್ದು, ವಾರ್ಷಿಕ ಅಪಘಾತಗಳ ಸಂಖ್ಯೆ, ಸಾವು ಹಾಗೂ ಗಾಯಗೊಂಡಿರುವ ಸಂಖ್ಯೆಯ ಆಧಾರದಲ್ಲಿ ತೀವ್ರ ಅಪಘಾತ ವಲಯ ಎಂದು ಗುರುತಿಸಲಾಗಿದೆ. ರಸ್ತೆ ಅಪಘಾತ ನಿಯಂತ್ರಿಸಲು ಸೈನ್ ಬೋರ್ಡ್ ಅಳವಡಿಸಲಾಗಿದೆ. ಅಪಘಾತಗಳ ಸಂಖ್ಯೆಯ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಸಂಚಾರ ಠಾಣೆ ಸಿಪಿಐ ಅಯ್ಯನಗೌಡ ಪಾಟೀಲ್ ತಿಳಿಸಿದರು. ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಮೋತಿ ವೃತ್ತದಲ್ಲಿ ಅಪಘಾತ ನಿಯಂತ್ರಿಸಲು ಸಿಗ್ನಲ್ ಅಳವಡಿಸುವ ಅಗತ್ಯವಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ