ಕೊಪ್ಪಳ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಕಲಿ ಬ್ಯಾಂಕ್ ಖಾತೆ ತೆರೆದು ನಿವೇಶನಾಕಾಂಕ್ಷಿಗಳ ₹೮.೪೩ ಕೋಟಿಗೂ ಅಧಿಕ ಹಣ ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ಜರುಗಿತು. ನಗರದ ಪ್ರಾಧಿಕಾರ ಕಚೇರಿಗೆ ಬಿಜೆಪಿಯವರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಬಿಜೆಪಿ ಮುಖಂಡ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರದ ಕುರಿತು ಕೊಪ್ಪಳ ಶಾಸಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಯಾರ ಒತ್ತಡದ ಮೇಲೆ ₹೮.೪೩ಕೋಟಿ ಹಣ ಅನೇಕ ಅಕೌಂಟ್‌ಗೆ ಜಮೆಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದರು.
ಸಚಿವ ತಂಗಡಗಿ, ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಹಗರಣದ ಕುರಿತು ಯಾವಾಗ ಉತ್ತರ ಕೊಡುತ್ತಿರಿ...? ಎಂಬುದನ್ನು ತಿಳಿಸಿ, ನಿಮಗೆಲ್ಲ ಇದರಲ್ಲಿ ಎಷ್ಟೆಷ್ಟು ಪಾಲು ಬಂದಿದೆ ಎಂಬುದನ್ನು ಬಹಿರಂಗ ಪಡಿಸಿ ಎಂದು ಒತ್ತಾಯಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಮಾತನಾಡಿ, ಆರೋಪಿಯ ಕುಟುಂಬಸ್ಥರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಕುರಿತು ತನಿಖೆ ನಡೆಸಿ ಹಣದ ಅಂತಿಮ ಫಲಾನುಭವಿ ಯಾರು ಎಂಬುದನ್ನು ಪತ್ತೆ ಹಚ್ಚಬೇಕು. ಪ್ರಕರಣದ ಪ್ರಮುಖ ಆರೋಪಿಗಳ ಬಂಧನ ವಿಳಂಬವಾಗುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸ್ಥಳೀಯ ಪೊಲೀಸ್ ತನಿಖೆಯ ಬದಲಿಗೆ ದಕ್ಷ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಚೇರಿ ಮುತ್ತಿಗೆ ಯತ್ನ: ಕೈಯಲ್ಲಿ ಭಿತ್ತಿ ಪತ್ರ ಹಿಡಿದು ರಾಜ್ಯ ಸರ್ಕಾರ ಹಾಗೂ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಕಚೇರಿಗೆ ಮುತ್ತಿಗೆ ಹಾಕಲು ಮುಂದಾದರು. ಪ್ರಾಧಿಕಾರದ ಕಚೇರಿಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ತಳ್ಳಾಟ-ನುಗ್ಗಾಟ ನಡೆಯಿತು. ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಬಿಜೆಪಿ ನಿಯೋಗವು ಎಸ್ಪಿ ಅರಸಿದ್ದಿ ಅವರನ್ನು ಭೇಟಿಯಾಗಿ ನಾಯಕರ ಸಹಿ ಒಳಗೊಂಡ ಮನವಿಪತ್ರ ಸಲ್ಲಿಸಿತು. ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ತನಿಖೆಗೊಳಪಡಿಸಿ ಶೀಘ್ರ ಆರೋಪಿಗಳನ್ನು ಬಂಧಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಯದಿದ್ದರೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವುದಾಗಿ ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.
ಕೊಪ್ಪಳ ಭ್ರಷ್ಟರಿಗೆ ರೆಡ್ ಕಾರ್ಪೆಟ್ ಹಾಸಿಗೆ ಹಾಸಿ ಕರೆಸಿಕೊಂಡ ಹಾಗೇ ಆಗಿದೆ. ಪ್ರಾಧಿಕಾರದ ಹಣ ತನ್ನ ಸ್ವಂತ ಖಾತೆಗೆ ಹಾಗೂ ಕುಟುಂಬದವರಿಗೆ ವರ್ಗಾವಣೆ ರವೀಂದ್ರ ಎಂಬಾತನು ಮಾಡಿಕೊಂಡಿದ್ದಾನೆ. ಇಷ್ಟೆಲ್ಲ ಭ್ರಷ್ಟಾಚಾರ ಆಗಿದೆ. ಇದು ಜಿಲ್ಲಾಡಳಿತದ ವೈಫಲ್ಯ ಇದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದ ಹಿಂದೆ ಯಾರೋ ಇದ್ದಾರೆ. ಅದಕ್ಕೆ ಇಷ್ಟೆಲ್ಲ ನಡೆದಿದೆ. ಹಿಂದೆ ನಿರ್ಮಿತಿ ಕೇಂದ್ರದಲ್ಲಿ ಅವ್ಯವಹಾರವಾಗಿತ್ತು. ರವೀಂದ್ರನನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಗೆ ಬರುತ್ತೇವೆ ಎಂದು ಗೊತ್ತಾಗಿ ನಮಗಿಂತ ಹೆಚ್ಚು ಜನ ಪೊಲೀಸರು ಬಂದು ಪ್ರತಿಭಟನೆ ನಿಲ್ಲಿಸುತ್ತಿದ್ದಾರೆ. ಪ್ರತಿಭಟನೆಗೆ ಅವಕಾಶ ಸಹ ಕೊಡುತ್ತಿಲ್ಲ. ಡಿಕೆಶಿ ಸಿಎಂ ಆಗಿದ್ದರಿಂದ ಬದಲಾವಣೆ ಆಗುತ್ತದೆ ಎಂದು ಭಾವಿಸಿದ್ದೇವು. ಆದರೆ ಮಾತಿನ ಪ್ರಕಾರ ಸಹ ನಡೆದುಕೊಳ್ಳುತ್ತಿಲ್ಲ ಎಂದರು.