ಕನ್ನಡಪ್ರಭ ವಾರ್ತೆ ಮೈಸೂರು
ಕಳೆದ 1177 ದಿನಗಳಿಂದ ಶಾಂತಿಯುತವಾಗಿ ಬಲವಂತದ ಭೂಸ್ವಾಧೀನದ ವಿರುದ್ಧ ದೇವನಹಳ್ಳಿಯ 13 ಗ್ರಾಮಗಳ ರೈತರು ನಡೆಸಿದ ವಿವಿಧ ಮಾದರಿಯ ಹೋರಾಟಕ್ಕೆ ಸರ್ಕಾರ ಕಿವಿಕೊಡದ ಕಾರಣದಿಂದಾಗಿ ಪ್ರತಿಭಟನೆ ನಡೆಸಲಾಗುತ್ತಿತ್ತು. ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಹತ್ತಾರು ಸಂಘಟನೆಗಳ ಸಾವಿರಾರು ಜನ ಸೇರಿದ್ದರು. ಸರ್ಕಾರದಿಂದ ಭೂ ಸ್ವಾಧೀನದ ಆದೇಶ ಹಿಂತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುವ ತೀರ್ಮಾನಕ್ಕೆ ಬರಲಾಗಿತ್ತು. ಇಡೀ ದಿನ ಶಾಂತಿಯುತವಾಗಿ ನಡೆದ ಹೋರಾಟದ ವೇದಿಕೆಗೆ ಸಂಜೆಯ ವೇಳೆಗೆ ಏಕಾಏಕಿ ನುಗ್ಗಿದ ಪೊಲೀಸರು 5 ಗಂಟೆಯ ನಂತರ ಪ್ರತಿಭಟನೆಗೆ ಅವಕಾಶವಿಲ್ಲ, ಪಟ್ಟಣದಲ್ಲಿ ಪ್ರತಿಭಟನೆ ಮಾಡುವಂತಿಲ್ಲ ಎಂದು ಪ್ರತಿಭಟನಾಕಾರರನ್ನು ಎಳೆದಾಡಿ ಬಂಧಿಸಿದ ರೀತಿ ಸರಿಯಲ್ಲ ಎಂದು ಕಿಡಿಕಾರಿದರು.
ಸರ್ಕಾರದ ರೈತ ವಿರೋಧಿ, ಸಂವಿಧಾನದ ಹಕ್ಕುಗಳ ವಿರೋಧಿ, ಅನ್ನಕ್ಕೆ ತತ್ವಾರ ಮಾಡುವ ಭೂ ಸ್ವಾಧೀನ ನೀತಿಗಳನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು. ಫಲವತ್ತಾದ ಭೂಮಿಯಲ್ಲಿ ತಮ್ಮ ಬದುಕು ಕಂಡುಕೊಂಡ ಯಾವುದೇ ರೈತರ ತಂಟೆಗೆ ಬರಬೇಡಿ. ರೈತರ ಭೂಮಿ ರೈತರದ್ದೇ ಆಗಿ ಉಳಿಸಬೇಕು. ಬೇಷರತ್ತಾಗಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು. ರೈತರ ಭೂಮಿಯನ್ನು ಸರ್ಕಾರದ ಯಾವುದೇ ಯೋಜನೆಗೆ ನೀಡಬಾರದು. ಕೂಡಲೇ ಕ್ಯಾಬಿನೆಟ್ ನಿರ್ಣಯ ಮಾಡಬೇಕು ಎಂದು ಆಗ್ರಹಿಸಿದರು.ಬಂಧಿತ ಹೋರಾಟಗಾರರ ವಿರುದ್ಧ ಯಾವುದೇ ಪ್ರಕರಣ ದಾಖಲಿಸದೇ ಬೇಷರತ್ ಬಿಡುಗಡೆ ಮಾಡಬೇಕು. ವೈಯಕ್ತಿಕವಾಗಿ ಸಂಘಟನಾತ್ಮಕವಾಗಿ ಆಗಿರುವ ಅನಾಹುತವನ್ನು ಸರ್ಕಾರವೇ ತುಂಬಿಕೊಡಬೇಕು. ಅಮಾನವೀಯವಾಗಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇನ್ನೆಂದೂ ಹೋರಾಟವನ್ನು ಮುರಿಯುವ ಅಸಾಂವಿಧಾನಿಕ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು.