ಪರೀಕ್ಷೆಗಳ ದುರುಪಯೋಗ ಹಾಗೂ ಅಕ್ರಮಗಳಿಗೆ ಕುಖ್ಯಾತಿಯಾಗಿರುವ ಎನ್‌ಟಿಎ ಸಂಸ್ಥೆ ಪರೀಕ್ಷೆಗಳ ಪಾರದರ್ಶಕ ನಿರ್ವಹಣೆಯಲ್ಲಿ ತನ್ನ ಸಂಪೂರ್ಣ ಅಸಮರ್ಥತೆ ಮತ್ತೊಮ್ಮೆ ಸಾಬೀತುಪಡಿಸಿದೆ.
ಕನಕಗಿರಿ: ಸೋನಂ ವಾಂಗ್ಟುಕ್‌ರನ್ನು ಬಲವಂತವಾಗಿ ಬಂಧಿಸಿರುವುದನ್ನು ಖಂಡಿಸಿ ಹಾಗೂ ನೀಟ್ ಯುಜಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಎಸ್‌ಎಫ್‌ಐ ತಾಲೂಕು ಘಟಕದಿಂದ ಮಂಗಳವಾರ ಪ್ರತಿಭಟಿಸಿ ಶಿರಸ್ತೇದಾರ್ ಶರಣಪ್ಪರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ ಮಾತನಾಡಿ, ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮೇ ೩ರಂದು ನಡೆಸಿದ ನೀಟ್ ಯುಜಿ ಪರೀಕ್ಷೆಗೆ ದೇಶಾದ್ಯಂತ ಸುಮಾರು ೨೨ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜಸ್ಥಾನ ಸೇರಿದಂರತೆ ವಿವಿಧೆಡೆ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆ ನಡೆಸಲಾಗಿದೆ. ಪರೀಕ್ಷಾ ಅಕ್ರಮ ಹಾಗೂ ಭವಿಷ್ಯದ ಅನಿಶ್ಚಿತತೆಯ ಪರಿಣಾಮ ದೇಶಾದ್ಯಂತ ೨೧ ಅಮಾಯಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆರಂಭದಿಂದಲೂ ಪರೀಕ್ಷೆಗಳ ದುರುಪಯೋಗ ಹಾಗೂ ಅಕ್ರಮಗಳಿಗೆ ಕುಖ್ಯಾತಿಯಾಗಿರುವ ಎನ್‌ಟಿಎ ಸಂಸ್ಥೆ ಪರೀಕ್ಷೆಗಳ ಪಾರದರ್ಶಕ ನಿರ್ವಹಣೆಯಲ್ಲಿ ತನ್ನ ಸಂಪೂರ್ಣ ಅಸಮರ್ಥತೆ ಮತ್ತೊಮ್ಮೆ ಸಾಬೀತುಪಡಿಸಿದೆ. ಈ ಹಿಂದೆ ೮೯ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದು, ೪೮ ಬಾರಿ ಮರು ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಹೊಣೆಗೇಡಿ ಹಾಗೂ ಅಸಮರ್ಥ ಎನ್‌ಟಿಎ ಸಂಸ್ಥೆ ತಕ್ಷಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ತಾಲೂಕಾಧ್ಯಕ್ಷ ಹನುಮೇಶ ಮ್ಯಾಗಡೆ ಮಾತನಾಡಿ, ಕಳೆದ ಇಪ್ಪತ್ತು ದಿನಗಳಿಂದ ಜಂತರ್ ಮಂತರ್‌ನಲ್ಲಿ ಸೋನಂ ವಾಂಗ್ಟುಕ್ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಶೈಕ್ಷಣಿಕ ಸುಧಾರಣೆಗಳಿಗಾಗಿ ಶಾಂತಿಯುತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಅವರ ನ್ಯಾಯಯುತ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಅನೇಕ ವಿದ್ಯಾರ್ಥಿಗಳೂ ಸಹ ಧರಣಿಯಲ್ಲಿ ಭಾಗಿಯಾಗಿದ್ದರು. ಆದರೆ, ಕೇಂದ್ರ ಸರ್ಕಾರವು ಪೊಲೀಸ್ ಬಲ ಪ್ರಯೋಗದ ಮೂಲಕ ಧರಣಿ ಹತ್ತಿಕ್ಕುವ ದಬ್ಬಾಳಿಕೆಯ ಮಾರ್ಗ ಆರಿಸಿಕೊಂಡಿದ್ದು, ನಮ್ಮ ದೇಶದ ಪ್ರಜಾಸತ್ತಾತ್ಮಕ ಪರಂಪರೆಗೆ ಕಪ್ಪು ಚುಕ್ಕೆಯಾಗಿದೆ. ಜು. ೨೦ರಂದು ಸಂಸತ್ ಚಲೋ ಚಳವಳಿಯ ಮೇಲೂ ಪೊಲೀಸರು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಬಲ ಪ್ರಯೋಗ ಮಾಡಿ ಶಾಂತಿಯುತ ಪ್ರತಿಭಟನೆ ಹತ್ತಿಕ್ಕಲು ಯತ್ನಿಸಿರುವುದು ಖಂಡನೀಯ ಎಂದರು.
ಈ ವೇಳೆ ಕೃಷಿ ಕೂಲಿ ಕಾರ್ಮಿಕರ ಸಂಘದ ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ತಾಲೂಕು ಅಧ್ಯಕ್ಷ ರಮೇಶ ಬಡಿಗೇರ, ಸದಸ್ಯ ಮಂಜುನಾಥ ಹಿರೇಡಂಕನಲ್, ದುರ್ಗಮ್ಮ, ಪ್ರಕಾಶ, ದೇವರಾಜ, ಪಲ್ಲವಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.