ಅಭಿಷೇಕ್ ಸಾವಿನ ಪ್ರಕರಣ ಸಮಗ್ರ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Jun 09, 2026, 02:00 AM IST
7ಕೆಎಂಎನ್ ಡಿ21 | Kannada Prabha

ಸಾರಾಂಶ

ಕೋಣಸಾಲೆ ಗ್ರಾಮದ ಪರಿಶಿಷ್ಟ ಜಾತಿ ಅಲೆಮಾರಿ ಕೊರಮ ಜನಾಂಗಕ್ಕೆ ಸೇರಿದ ಯುವಕ ಅಭಿಷೇಕ್ ಬಿನ್ ಕೃಷ್ಣಪ್ಪ ಕೊಲೆ ಪ್ರಕರಣ ಖಂಡಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬೆಸಗರಹಳ್ಳಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಕೋಣಸಾಲೆ ಗ್ರಾಮದ ಪರಿಶಿಷ್ಟ ಜಾತಿ ಅಲೆಮಾರಿ ಕೊರಮ ಜನಾಂಗಕ್ಕೆ ಸೇರಿದ ಯುವಕ ಅಭಿಷೇಕ್ ಬಿನ್ ಕೃಷ್ಣಪ್ಪ ಕೊಲೆ ಪ್ರಕರಣ ಖಂಡಿಸಿ, ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬೆಸಗರಹಳ್ಳಿ ಪೊಲೀಸ್ ಠಾಣೆ ಎದುರು ಜಿಲ್ಲಾ ಕುಳುವ ಸಮಾಜ, ಬೆಂಗಳೂರು ದಕ್ಷಿಣ ಜಿಲ್ಲಾ ಕೊರಮ ಸೇವಾ ಸಂಘ (ರಿ) ಹಾಗೂ ಎಕೆಎಂಎಸ್ ಸಂಘಟನೆಗಳ ಆಶ್ರಯದಲ್ಲಿ ಮುಖಂಡರು, ಗ್ರಾಮಸ್ಥರ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಗ್ರಾಮದ ಸವರ್ಣೀಯ ಸಮುದಾಯಕ್ಕೆ ಸೇರಿದ ತಿಮ್ಮ ಎಂಬಾತ ಮೃತ ಅಭಿಷೇಕ್‌ಗೆ 40 ಸಾವಿರ ರು. ಸಾಲ ನೀಡಿದ್ದು, ಎಳನೀರು ಕುಯ್ಯುವ ಕೆಲಸಕ್ಕೆ ಬಾರದ ಕಾರಣ ಕೋಪಗೊಂಡು ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದಾನೆ. ನಂತರ ಮನೆಗೆ ನುಗ್ಗಿ ಹಲ್ಲೆ ನಡೆಸಿ ಕೊಲೆ ಮಾಡಿ ಆತ್ಮಹತ್ಯೆಯಂತೆ ಬಿಂಬಿಸುವ ಉದ್ದೇಶದಿಂದ ನೇಣು ಹಾಕಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದರು.

ಈ ಘಟನೆಯ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಿ ಮೃತ ಯುವಕನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಸಂಬಂಧ ಮದ್ದೂರು ವೃತ್ತ ನಿರೀಕ್ಷಕರಿಗೆ ಮನವಿ ಪತ್ರ ಸಲ್ಲಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಹಾಗೂ ಇತರೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಪ್ರಕರಣದ ಸತ್ಯಾಸತ್ಯತೆ ಹೊರಬಂದು ಆರೋಪಿಗಳಿಗೆ ಶಿಕ್ಷೆಯಾಗುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಕೆಎಂಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ್ (ರಾಮನಗರ), ವಕೀಲರಾದ ಕಿರಣ್ ಕುಮಾರ್ ಕೊತ್ತಗೆರೆ, ಪುಟ್ಟರಾಜು (ಮದ್ದೂರು), ನಟೇಶ್ (ಬೆಂಗಳೂರು), ಪತ್ರಕರ್ತ ಕೃಷ್ಣಮೂರ್ತಿ (ಲಕ್ಷೀಪುರ, ಚೆನ್ನಪಟ್ಟಣ), ಜಿಲ್ಲಾ ಕುಳುವ ಸಮಾಜದ ಮುಖಂಡರಾದ ಟೆಂಪೋ ರಾಮಕೃಷ್ಣ, ರಾಮಶೆಟ್ಟಿ (ಹನಕೆರೆ), ತಾಲೂಕು ಮುಖಂಡರಾದ ನಾರಾಯಣಸ್ವಾಮಿ, ಮಹೇಶ್ (ನಗರಕೆರೆ), ಅಬ್ಬೂರು ದೊಡ್ಡಿ ವೆಂಕಟೇಶ್, ಕೊಪ್ಪ ರವಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಂದಿನ ಮೂರು ದಿನ ಭಾರಿ ಮಳೆ ಸಾಧ್ಯತೆ: ಜಿಲ್ಲಾಧಿಕಾರಿ
ಕೂಡ್ಲಿಗಿಯಲ್ಲಿ ದಸಂಸ ಬೃಹತ್ ಪ್ರತಿಭಟನೆ