ಕುಡಿವ ನೀರಿನ ಸಮಸ್ಯೆ ನೀಗಿಸುವಂತೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Sep 01, 2026, 01:30 AM IST
31ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ದೋಣಿಮಡಗು ಗ್ರಾಪಂಃ ಬುವನಹಳ್ಳಿ ಗ್ರಾಮಸ್ಥರು ನೀರಿಗಾಗಿ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಹಳ್ಳಿ ಗ್ರಾಮದಲ್ಲಿ ಕಳೆದ 3ತಿಂಗಳಿಂದ ಕುಡಿಯುವ ನೀರಿನ ಅಭಾವ ತಲೆದೋರಿದೆ.

ದೋಣಿಮಡಗು ಗ್ರಾಮ ಪಂಚಾಯಿತಿ ಅಧಿಕಾರಿಗಳ ವರ್ತನೆ ವಿರುದ್ಧ ಧಿಕ್ಕಾರ

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಹಲವು ತಿಂಗಳುಗಳಿಂದಲೂ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಗ್ರಾಪಂ ಅಧಿಕಾರಿಗಳು ಯಾವುದೇ ಕ್ರಮವಹಿಸದೆ ನಿರ್ಲಕ್ಷ್ಯ ತಾಳಿರುವುದನ್ನು ಖಂಡಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಧಿಕಾರಿಗಳ ವರ್ತನೆ ವಿರುದ್ಧ ಧಿಕ್ಕಾರ ಕೂಗಿದರು.

ತಾಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಹಳ್ಳಿ ಗ್ರಾಮದಲ್ಲಿ ಕಳೆದ 3ತಿಂಗಳಿಂದ ಕುಡಿಯುವ ನೀರಿನ ಅಭಾವ ತಲೆದೋರಿದ್ದು, ಪಂಚಾಯ್ತಿ ಪಿಡಿಒ ಗಮನಕ್ಕೆ ತಂದಿದ್ದರೂ ಯಾವುದೇ ರೀತಿ ಸ್ಪಂದಿಸದೆ ಕಡೆಗಣಿಸಿದ್ದರು. ಇದನ್ನು ಖಂಡಿಸಿ ಗ್ರಾಮಸ್ಥರು ಪಂಚಾಯಿತಿ ಕಾರ್ಯಾಲಯದ ಮುಂದೆ ಖಾಲಿ ಕೊಡಗಳನ್ನಿಟ್ಟು, ಅಲ್ಲೇ ಚಿತ್ರಾನ್ನ ತಿನ್ನುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.

ಹಲವು ತಿಂಗಳುಗಳಿಂದ ಭುವನಹಳ್ಳಿ ಗ್ರಾಮದಲ್ಲಿ ಜಲಕ್ಷಾಮ ತೀವ್ರಗೊಂಡಿದ್ದು, ಕುಡಿಯುವ ನೀರಿಗಾಗಿ ಗ್ರಾಮಸ್ಥರು ಮೈಲಿಗಟ್ಟಲೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆಯಿಂದ ಪ್ರತಿಭಟನೆ ಮಾಡಿ ಮಧ್ಯಾಹ್ನದವರೆಗೂ ಪಂಚಾಯಿತಿ ಅಂಗಳದಲ್ಲೇ ಕುಳಿತಿದ್ದ ಪ್ರತಿಭಟನಾಕಾರರು, ಪಿಡಿಒ ಆನಂದ್ ಮಾತ್ರ ಸ್ಥಳಕ್ಕೆ ಬರದೆ ಉದ್ದಟತನ ತೋರಿದ್ದು ಪ್ರತಿಭಟನಾಕಾರರನ್ನು ಮತ್ತಷ್ಟು ಕೆರಳಿಸಿತು.ಕೂಡಲೇ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯಿತಿ ಕಾರ್ಯಾಲಯದ ಮುಂದೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಬಿ.ಎಂ. ಚಂಗಲರಾಯರೆಡ್ಡಿ, ವಿಜಯ್ ಕುಮಾರ್, ಮಂಜು, ಮೋಹನ್ ಬಿ ಎಂ, ಮಂಜುನಾಥ ರೆಡ್ಡಿ, ಸೋಮಶೇಖರ್ ರೆಡ್ಡಿ, ಗುರುಮೂರ್ತಿ ರೆಡ್ಡಿ, ಮಂಜುನಾಥ,ರಾಜಗೋಪಾಲ್ ರೆಡ್ಡಿ, ಕೆ. ವೆಂಕಟೇಶ್, ಸುಬ್ರಮಣಿ, ಗುರುಮೂರ್ತಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಚೇನಹಳ್ಳಿ ಶಾಲೆಯನ್ನು ಕೆಪಿಎಸ್ ಶಾಲೆಯಾಗಿ ಅಭಿವೃದ್ಧಿ ಪಡಿಸಲು ಆಗ್ರಹ
ರೈಲು ಹರಿದು ಅಜ್ಜಿ 2 ಮೊಮ್ಮಕ್ಕಳ ದುರ್ಮರಣ