ಹಾವೇರಿ: ಧರ್ಮಸ್ಥಳ ಪುಣ್ಯಕ್ಷೇತ್ರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ, ಅಪಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಪ್ರಕರಣವನ್ನು ಎನ್ಐಎಗೆ ವರ್ಗಾಯಿಸುವಂತೆ ಆಗ್ರಹಿಸಿ ಬಿಜೆಪಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಸಿದ್ದೇಶ್ವರ ದೇವಸ್ಥಾನ ಬಳಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹುಕ್ಕೇರಿಮಠ ರಸ್ತೆ, ಎಂ.ಜಿ. ರಸ್ತೆ, ಮಹಾತ್ಮ ಗಾಂಧಿ ವೃತ್ತ, ಹಳೆ ಕೋರ್ಟ್, ಹಳೆ ಪುರಸಭೆ ರಸ್ತೆ ಮಾರ್ಗವಾಗಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತವನ್ನು ಬಂದು ತಲುಪಿದರು.
ಪಾದಯಾತ್ರೆಯಲ್ಲಿ ಅಪಪ್ರಚಾರ ಮಾಡುತ್ತಿರುವ ಯೂಟ್ಯೂಬರ್, ಪೂರ್ವಾಪರ ಯೋಚನೆ ಮಾಡದೆ ಎಸ್ಐಟಿ ತನಿಖೆ ರಚನೆ ಮಾಡಿದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುವ ಕೆಲಸವನ್ನು ಸರ್ಕಾರಕ್ಕೂ ಮಾಡಲಿಕ್ಕೆ ಆಗುವುದಿಲ್ಲ. ಮಹಿಳೆಯರ ಸಬಲೀಕರಣಕ್ಕೆ ಸಾಲ, ಶಿಕ್ಷಣಕ್ಕೆ ಉತ್ತೇಜನ, ಆರೋಗ್ಯಕ್ಕೆ ವೈದ್ಯಕೀಯ ಸೇವೆ, ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ನೀಡಲು ಕಟಿಬದ್ಧವಾಗಿದೆ. ಇದನ್ನು ಸಹಿಸದ ಸರ್ಕಾರ ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕುಮ್ಮಕ್ಕು ನೀಡುತ್ತಿದೆ. ಅಪಪ್ರಚಾರ ಮಾಡುವ ಮುಸುಕುದಾರಿ ವ್ಯಕ್ತಿ, ಮಟ್ಟೆಣ್ಣವರ, ಸಮೀರ್, ಸುಜಾತಾ ಭಟ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರೆ, ಗೃಹ ಸಚಿವರೇ ನಿಮಗೇನಾದರೂ ವಿವೇಚನೆ ಇದ್ದರೆ ಪ್ರಕರಣವನ್ನು ಎಸ್ಐಟಿ ಬದಲಿಗೆ ಎನ್ಐಎ ತನಿಖೆಗೆ ಒಳಪಡಿಸಿ. ಅಪಪ್ರಚಾರ ಮಾಡುವ ಯೂಟ್ಯೂಬರ್ಗಳಿಗೆ ವಿದೇಶದಿಂದ ಅಕ್ರಮ ಹಣ ಬರುವ ಸಂಶಯವಿದ್ದು, ಇದನ್ನು ತನಿಖೆ ನಡೆಸಬೇಕು. ಎಲ್ಲರಿಗೂ ಮಂಪರು ಪರೀಕ್ಷೆ ಮಾಡಿಸಿ ಸತ್ಯಾಸತ್ಯತೆ ಹೊರಗೆಳೆಯಬೇಕು. ಧರ್ಮದ ಮೇಲೆ ನಂಬಿಕೆ ಇಟ್ಟಿರುವ ಧರ್ಮಸ್ಥಳ ಭಕ್ತರಿಗೆ ನ್ಯಾಯ ಒದಗಿಸಬೇಕು ಎಂದರು.ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ ಮಾತನಾಡಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನ ಭಾರತದಲ್ಲಿಯೇ ಪವಿತ್ರವಾದ ದೇವಸ್ಥಾನ. ಧರ್ಮಸ್ಥಳದಲ್ಲಿ ನಿಷ್ಠೆ, ಶಕ್ತಿ ಇರುವ ನಂಬಿಕೆ ಜನರಲ್ಲಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕವಾಗಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ದಿಟ್ಟ ಕ್ರಾಂತಿ ಮಾಡಿದೆ. ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಎಡಪಂಥೀಯ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಧರ್ಮಸ್ಥಳಕ್ಕೆ ಅಪಖ್ಯಾತಿ ತರುವ ತಿಮರೋಡಿ, ಮಟ್ಟೆಣ್ಣವರ, ಸಮೀರ್, ಜಯಂತ್, ಸುಜಾತರಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.