ಒಣಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಣೆಗೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Mar 07, 2025, 12:45 AM IST
ಒಣಮೆಣಸಿನಕಾಯಿ ಬೆಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಬೆಂಬಲಬೆಲೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಬಳ್ಳಾರಿಯಲ್ಲಿ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ಮೆಣಸಿನಕಾಯಿ ಬೆಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಬೆಂಬಲಬೆಲೆ ಘೋಷಣೆ ಮಾಡಿ ಬೆಳೆಗಾರರನ್ನು ರಕ್ಷಣೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು.

ಬೆಂಬಲ ಬೆಲೆ ಘೋಷಣೆ-ಮಾರುಕಟ್ಟೆ ಸ್ಥಾಪನೆಗೆ ಮುಖಂಡರ ಆಗ್ರಹ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಮೆಣಸಿನಕಾಯಿ ಬೆಳೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಬೆಂಬಲಬೆಲೆ ಘೋಷಣೆ ಮಾಡಿ ಬೆಳೆಗಾರರನ್ನು ರಕ್ಷಣೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಆರ್.ಮಾಧವರೆಡ್ಡಿ ಕರೂರು ನೇತೃತ್ವದಲ್ಲಿ ನೂರಾರು ರೈತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಆದರೆ, ಈ ಬಾರಿ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ವೆಚ್ಚದಲ್ಲಿ ಬೆಳೆದ ಬೆಳೆಗಳು ವೈಜ್ಞಾನಿಕ ಬೆಲೆ ಸಿಗದಿರುವುದು ಬೆಳೆಗಾರರಲ್ಲಿ ಆತಂಕ ಮೂಡಿಸಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ಜರುಗಿದ ಪ್ರತಿಭಟನಾ ಧರಣಿಯಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಆರ್‌.ಮಾಧವರೆಡ್ಡಿ ಕರೂರು, ಬಳ್ಳಾರಿ ಜಿಲ್ಲೆಯಲ್ಲಿ 43292 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 96816 ಟನ್‌ನಷ್ಟು ಒಣಮೆಣಸಿನಕಾಯಿ ಬೆಳೆಯಲಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ 3351 ತಳಿಯ ಒಣಮೆಣಸಿನಕಾಯಿ ಪ್ರತಿ ಟನ್‌ಗೆ 6 ಸಾವಿರ ರು. ಹಾಗೂ ಬ್ಯಾಡಗಿ ತಳಿಗೆ 12 ಸಾವಿರ ರು.ಗಳಿಷ್ಟಿದೆ. ಕಳೆದ ವರ್ಷ 3351 ಮಾದರಿ ತಳಿಗೆ 25 ಸಾವಿರ ರು. ಹಾಗೂ ಬ್ಯಾಡಗಿ ತಳಿಗೆ 50 ಸಾವಿರ ರು.ವರೆಗೆ ದರವಿತ್ತು. ಈ ವರ್ಷ ದಿಢೀರ್ ಬೆಲೆ ಕುಸಿತ ಕಂಡಿರುವುದರಿಂದ ರೈತರು ಭಾರೀ ಪ್ರಮಾಣದ ನಷ್ಟಕ್ಕೀಡಾಗಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಆಂಧ್ರ ಸರ್ಕಾರದ ಮಾದರಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹11600 ಗಳಂತೆ ಬೆಂಬಲ ಬೆಲೆ ಘೋಷಣೆ ಮಾಡಿ, ರೈತರನ್ನು ರಕ್ಷಣೆ ಮಾಡಬೇಕು.

ಬಳ್ಳಾರಿ ಹೊರ ವಲಯದ ಆಲದಹಳ್ಳಿ ಬಳಿ ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪನೆಗೆಂದು 23 ಎಕರೆ ಜಮೀನು ಕಾಯ್ದಿರಿಸಲಾಗಿದ್ದು, ಬೆಳೆಗಾರರ ಅನುಕೂಲಕ್ಕಾಗಿ ಕೂಡಲೇ ಸರ್ಕಾರ ಮುಂದಿನ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.

ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ಡಿಸಿ ಕಚೇರಿ ಎದುರು ಧರಣಿ ನಡೆಸಿದರು. ಸಂಘದ ರಾಜ್ಯ ಗೌರವಾಧ್ಯಕ್ಷ ಸ.ರಘುನಾಥ, ಜಿಲ್ಲಾ ಪ್ರಮುಖರಾದ ಬೈಲೂರು ಲಕ್ಷ್ಮಿಕಾಂತ ರೆಡ್ಡಿ, ಗಣಪಾಲ್ ಐನಾಥರೆಡ್ಡಿ, ಬಿ.ಕುಮಾರಗೌಡ ಮತ್ತಿತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ