ರಮ್ಮಿ ಸರ್ಕಲ್‌ ಗೇಮ್‌ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Oct 17, 2024 12:04 AM

ಸಾರಾಂಶ

ಅಕ್ರಮವಾಗಿ ನಡೆಸುತ್ತಿರುವ ರಮ್ಮಿ ಆನ್‌ಲೈನ್ ಬೆಟ್ಟಿಂಗ್ ಮುಂತಾದ ಬೆಟ್ಟಿಂಗ್ ಆ್ಯಪ್ ಮತ್ತು ನಡೆಸುತ್ತಿರುವವರನ್ನೂ ಬಂಧಿಸಬೇಕು ಮತ್ತು ಆನ್‌ಲೈನ್ ಬೆಟ್ಟಿಂಗ್ ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಸುಮಾರು ವರ್ಷಗಳಿಂದ ಆನ್‌ಲೈನ್ ಬೆಟ್ಟಿಂಗ್ ಹಾಗೂ ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳಿಂದ ಆಗುತ್ತಿರುವ ಅನಾಹುತಗಳಿಂದ ಸರ್ಕಾರಿ ನೌಕರರು, ಯುವಕರು ಇದನ್ನು ಚಟವಾಗಿಸಿಕೊಂಡಿದ್ದು ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ನಡೆಸುತ್ತಿರುವ ರಮ್ಮಿ ಆನ್‌ಲೈನ್ ಬೆಟ್ಟಿಂಗ್ ಮುಂತಾದ ಬೆಟ್ಟಿಂಗ್ ಆ್ಯಪ್ ಮತ್ತು ನಡೆಸುತ್ತಿರುವವರನ್ನೂ ಬಂಧಿಸಬೇಕು ಮತ್ತು ಆನ್‌ಲೈನ್ ಬೆಟ್ಟಿಂಗ್ ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷರಾದ ಭಾನುಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ಸುಮಾರು ೧೦ ವರ್ಷಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಸುಮಾರು ವರ್ಷಗಳಿಂದ ಆನ್‌ಲೈನ್ ಬೆಟ್ಟಿಂಗ್ ಹಾಗೂ ಆನ್‌ಲೈನ್ ಗೇಮಿಂಗ್ ವೆಬ್‌ಸೈಟ್‌ಗಳಿಂದ ಆಗುತ್ತಿರುವ ಅನಾಹುತಗಳಿಂದ ಸರ್ಕಾರಿ ನೌಕರರು, ಯುವಕರು ಇದನ್ನು ಚಟವಾಗಿಸಿಕೊಂಡಿದ್ದು ಇದರಿಂದ ಹಲವಾರು ಕುಟುಂಬಗಳು ಬೀದಿಗೆ ಬಂದಿದೆ. ಹಾಗೂ ಹಲವಾರು ಯುವಕರು, ವಿದ್ಯಾರ್ಥಿಗಳು, ಆತ್ಮಹತ್ಯೆ ಮಾಡಿಕೊಂಡಿದ್ದು, ಈಗಾಗಲೇ ಕಮಿರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣಾ ವ್ಯಾಪಿಯಲ್ಲಿ ಬೆಟ್ಟಿಂಗ್ ಗೇಮ್‌ಗಳನ್ನು ನಡೆಸುತ್ತಿದ್ದ ಇಬ್ಬರು ಬುಕ್ಕಿಗಳ ಮೇಲೆ ಎಫ್‌ಐರ್‌ ದಾಖಲಿಸಿದ್ದು, ಇದರ ಬಗ್ಗೆ ಇನ್ನು ಹೆಚ್ಚಿನ ರೀತಿಯಲ್ಲಿ ಜನರಿಗೆ ಇದರ ಬಗ್ಗೆ ಅರಿವು ಮೂಡಿಸಲು ಹಾಗೂ ಈ ರೀತಿಯಾಗಿ ಮೋಸ ಮಾಡುವ ಉದ್ದೇಶದಿಂದಲೇ ಜನರನ್ನು ವಂಚಿಸುತ್ತಿರುವ ಆನ್‌ಲೈನ್ ಬೆಟ್ಟಿಂಗ್ ರಮ್ಮಿ ಸರ್ಕಲ್‌ ಹಾಗೂ ಇತರೆ ಆನ್‌ಲೈನ್ ವೆಬ್‌ಸೈಟ್‌ಗಳನ್ನು ಆಗಿನ ಮತ್ತು ಈಗಿನ ಬೆಟ್ಟಿಂಗ್ ಆ್ಯಪ್‌ಗಳನ್ನು ಕರ್ನಾಟಕ ರಾಜ್ಯಾದ್ಯಂತ ನಿಷೇಧಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದರು.

ಒಕ್ಕಲಿಗರ ಸಂಘದ ರಾಜೇಶ್ ಗೌಡ ಮಾತನಾಡಿ, ಮನೆ ಹಾಳು ಮಾಡುವ ಯಾವುದೇ ಜೂಜಾಟಗಳನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕು. ಹಿಂದೆ ಇದ್ದಂತಹ ಸರಕಾರಗಳು ಸಾರಾಯಿ, ಒಂದಂಕಿ ಲಾಟರಿ ನಿಷೇಧ ಮಾಡದಂತೆ ಅದರಂತೆ ಸಂಪೂರ್ಣವಾಗಿ ಆನ್ಲೈನ್ ಜೂಜಾಟವನ್ನು ಆಡಬಾರದು. ಈ ಆಟದಿಂದ ಯುವಕರು, ಯುವತಿಯರು, ಸರಕಾರಿ ಅಧಿಕಾರಿಗಳು ತಮ್ಮ ಹಣ ಕಳೆದುಕೊಂಡು ಬೀದಿಗೆ ಬರುತ್ತಿದ್ದಾರೆ ಎಂದರು. ಕೂಡಲೇ ಮುಖ್ಯಮಂತ್ರಿಗಳು ಈ ಆನ್ಲೈನ್ ಜೂಜಾಟ ನಿಷೇಧಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಮ್ಮ ಕರ್ನಾಟಕ ಸೇನೆಯ ಚಂದನ್ ಗೌಡ, ಪ್ರವೀಣ್ ಗೌಡ, ಆರೀಫ್, ತನುಪ್ರಿಯ, ಮಮತಾ, ಕುಮಾರ್‌, ಪ್ರದೀಪ್, ಗುರುಪ್ರಸಾದ್ ಇತರರು ಉಪಸ್ಥಿತರಿದ್ದರು.

Share this article