ಮುಂಡಗೋಡ: ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನವರು ಸೋಮವಾರ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಕೆಲ ಕಾಲ ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿದರು.
ಪಟ್ಟಣದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಸುತ್ತಮುತ್ತ ಪ್ರದೇಶ ಊರಿನ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಲು ಬರುತ್ತಾರೆ. ಆದರೆ ಕಾಲೇಜು ಬಳಿ ಬಸ್ ನಿಲುಗಡೆ ಮಾಡದೇ ಇರುವುದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಸಾದ್ಯವಾಗದೇ ವಿದ್ಯಾರ್ಥಿಗಳಿಗೆ ತರಗತಿಗಳು ತಪ್ಪಿ ಹೋಗುತ್ತಿವೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದವರಿಗೆ ಮನವಿ ಮಾಡಿದರೂ ಏನು ಪ್ರಯೋಜನವಾಗಿಲ್ಲ. ತಕ್ಷಣದಿಂದ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿಗಳಿಗೆ ಕಾಲೇಜಿಗೆ ತೆರಳಲು ಬಸ್ ವ್ಯವಸ್ಥೆಯನ್ನು ಮಾಡಿ ಹಾಗೂ ಹುಬ್ಬಳ್ಳಿ-ಶಿರಸಿಗೆ ಸಂಚರಿಸುವ ಬಸ್ಸುಗಳ ನಿಲುಗಡೆ ಮಾಡಿ ಬಸ್ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸಿದರು.ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ಕೇವಲ ಕಾಲೇಜು ಒಂದಿದ್ದರೆ ಸಾಲದು. ಜೊತೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ವ್ಯವಸ್ಥೆ ಮಾಡಬೇಕು. ಬಸ್ ವ್ಯವಸ್ಥೆ ಇಲ್ಲದ ಕಾರಣ ಕಾಲೇಜಿನ ಮಕ್ಕಳು ರಾತ್ರಿಯಾದರೂ ಮನೆಗೆ ತಲುಪಲಾಗುತ್ತಿಲ್ಲ. ಇದರಿಂದ ತೀವ್ರ ತೊಂದರೆಯಾಗುತ್ತಿದೆ. ತಕ್ಷಣ ಬಸ್ಸಿನ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕಾಗಮಿಸಿದ ಶಾಸಕ ಶಿವರಾಮ ಹೆಬ್ಬಾರ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಕೆ.ಎಸ್.ಆರ್.ಟಿಸಿ ಅಧಿಕಾರಿಗಳಿಗೆ ಸೂಚಿಸಿದರು. ಇಂದಿನಿಂದಲೇ ಸಮಸ್ಯೆ ಪರಿಹರಿಸುವ ಭರವಸೆಯ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವಿಭಾಗ ಸಂಚಾಲಕ ಸಂಜಯ ಗಾಂವಕರ ಪ್ರತಿಭಟನೆ ನೇತೃತ್ವ ವಹಿಸಿದ್ದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ಯಶ್ ಬೆಣ್ಣಿ, ಖೇಲೋ ಭಾರತ್ ರಾಜ್ಯ ಸಂಚಾಲಕ ನಿಂಗಪ್ಪ ಸುಳ್ಳದ, ವಿದ್ಯಾರ್ಥಿ ಪ್ರಮುಖರಾದ ಶಶಾಂಕ್ ನಾಯ್ಕ, ಪ್ರಶಾಂತ್ ನೇಮಣ್ಣನವರ, ಶಿವಾನಂದ ದೇವಿಕೊಪ್ಪ, ವಿದ್ಯಾರ್ಥಿನಿಯರ ಪ್ರಮುಖರಾದ ಉಷಾ, ಅಶ್ಮಿತಾ ಇದ್ದರು. ಸಿಪಿಐ ರಂಗನಾಥ ನೀಲಮ್ಮನವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮುಂಡಗೋಡದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಬಸ್ ನಿಲುಗಡೆಗೆ ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು.