ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ನೀರಾವರಿ ಇಲಾಖೆ ವ್ಯಾಪ್ತಿಗೊಳಪಡುವ ಚಾನಲ್ ಗಳಲ್ಲಿ ಹೂಳು ತೆಗೆಸಿ ಅಭಿವೃದ್ಧಿ ಕೈಗೊಳ್ಳುವಲ್ಲಿ ಇಲ್ಲಿನ ಅಧಿಕಾರಿಗಳು ನಿರ್ಲಕ್ಷ್ಯತಾಳಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿ ರೈತ ಮುಖಂಡರು ಕಬಿನಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು. ಕೆಲಕಾಲ ನೀರಾವರಿ ನಿಗಮದ ಅಧಿಕಾರಿಗಳ ರೈತಪರ ನಿರ್ಲಕ್ಷ್ಯ ದೋರಣೆ ವಿರುದ್ದ ಐಬಿ ವೃತ್ತದ ಬಳಿ ರೈತರು ಕೆಲಕಾಲ ರಸ್ತೆ ತಡೆದರು.ಕಬಿನಿ ಪ್ರಭಾರ ಇಇ ಈರಣ್ಣ ಮಾತನಾಡಿ, ರೈತರ ಸಮಸ್ಯೆಗಳಿಗೆ ನಾನು ಸ್ಪಂದಿಸುವೆ. ಕಾಲುವೆಗಳ ಸ್ವಚ್ಛಗೊಳಿಸಲು ಈಗಾಗಲೇ ಸರ್ಕಾರ ಅನುದಾನ ದೊರೆತಿದ್ದು, ಕಾಲುವೆಗಳ ಸ್ವಚ್ಛತಾ ಕಾಮಗಾರಿ ನಡೆಯುತ್ತಿದೆ. ಆದರೆ ಕಾಲುವೆಗಳ ಅಸಮರ್ಪಕ ಸ್ವಚ್ಛವಾಗಿರುವ ಬಗ್ಗೆ ನನ್ನ ಗಮನದಲ್ಲಿರಲಿಲ್ಲ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಸಮಸ್ಯೆ ಸರಿಪಡಿಸುವಂತೆ ಸೂಚನೆ ನೀಡುತ್ತೇನೆ. ಯಾವುದೇ ಸಂದರ್ಭದಲ್ಲೂ ರೈತರ ಬೇಡಿಕೆ ಈಡೇರಿಸಲು ಇಲಾಖೆ ಸಿದ್ಧವಿದೆ ಎಂದು ಭರವಸೆ ನೀಡಿದ ಹಿನ್ನೆಲೆ ರೈತರು ಪ್ರತಿಭಟನೆ ವಾಪಸ್ ಪಡೆದರು. ಬಂದೋ ಬಸ್ತ್ ಇಲ್ಲದ ಕಾರಣ, ರಸ್ತೆ ತಡೆ:
ಪ್ರವಾಸಿ ಮಂದಿರದ ಬಳಿ ಪ್ರತಿಭಟನೆಗೆ ಸಜ್ಜಾದ ಪ್ರತಿಭಟನಾಕಾರರಿಗೆ ಬಂದೋ ಬಸ್ತ್ ನೀಡಲು ನಿರ್ಲಕ್ಷ್ಯವಹಿಸಿದ ಪೊಲೀಸ್ ಇಲಾಖೆ ವಿರುದ್ದ ರೈತ ಮುಖಂಡರು ಕೆಲಕಾಲ ಪ್ರತಿಭಟಿಸಿದರು.ಲಕ್ಷಾಂತರ ಮಂದಿಗೆ ಅನ್ನ ನೀಡುವ ಅನ್ನದಾತನಿಗೆ ಇಲ್ಲಿ ಬಂದೋ ಬಸ್ತ್ ಇಲ್ಲ, ಅದೇ ಸಚಿವರು ಬರುತ್ತಾರೆ ಎಂದರೆ ಎಲ್ಲರೂ ಹೋಗುತ್ತಾರೆ, ಇಂತಹ ಮೆಧು ದೋರಣೆಗಳನ್ನು ಸರ್ಕಾರ ಬಿಡಬೇಕು, ನಮಗೂ ಸೂಕ್ತ ರಕ್ಷಣೆ ಬೇಕು ಎಂದು ಆಗ್ರಹಿಸಿ ಕೆಲಕಾಲ ಪ್ರತಿಭಟಿಸಿದ ಬಳಿಕ ನೀರಾವರಿ ಇಲಾಖೆ ಕಚೇರಿ ಮುಂಭಾಗ ತೆರಳಿ ಪ್ರತಿಭಟಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ, ಜಿಲ್ಲಾ ಕಾರ್ಯದರ್ಶಿ ಕಾಮಗೆರೆ ಬಸವರಾಜು, ಹನೂರು ತಾಲ್ಲೂಕು ಅಧ್ಯಕ್ಷ ಚಿಕ್ಕರಾಜು, ಉಪಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಗೌರವಾಧ್ಯಕ್ಷ ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಭುಸ್ವಾಮಿ, ಸಂಘಟನಾ ಕಾರ್ಯದರ್ಶಿ ಶಾಂತಮೂರ್ತಿ, ಪವನ್, ಮುಖಂಡರುಗಳಾದ ಅಣಗಳ್ಳಿ ದಶರಥ, ರಾಮಕೃಷ್ಣ, ವಾಸು ಇನ್ನಿತರಿದ್ದರು.