ರಾಣಿಬೆನ್ನೂರಿನಲ್ಲಿ ಕೆಳಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork | Published : Oct 8, 2024 1:03 AM

ಸಾರಾಂಶ

ಗದಗ- ಹೊನ್ನಾಳಿ ರಸ್ತೆಗೆ ಕೆಳಸೇತುವೆ ನಿರ್ಮಿಸಿ ರಾಣಿಬೆನ್ನೂರು -ಕೂನಬೇವು ರಸ್ತೆಯಲ್ಲಿ ಈಗಿರುವಂತೆಯೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಕೂನಬೇವು, ಕಜ್ಜರಿ ಹಾಗೂ ಬ್ಯಾಡಗಿ ತಾಲೂಕು ಬುಡಪನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ಗದಗ- ಹೊನ್ನಾಳಿ ರಸ್ತೆಗೆ ಕೆಳಸೇತುವೆ ನಿರ್ಮಿಸಿ ರಾಣಿಬೆನ್ನೂರು -ಕೂನಬೇವು ರಸ್ತೆಯಲ್ಲಿ ಈಗಿರುವಂತೆಯೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಿ ನಗರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತಾಲೂಕಿನ ಕೂನಬೇವು, ಕಜ್ಜರಿ ಹಾಗೂ ಬ್ಯಾಡಗಿ ತಾಲೂಕು ಬುಡಪನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಈ ಸಮಯದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಈ ಹಿಂದೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ( ಕೆಶಿಪ್) ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಪರಿಶೀಲನೆ ನಡೆಸುತ್ತೇವೆ ಎಂದು ಸಬೂಬು ಹೇಳುತ್ತ ರಸ್ತೆ ಕಾಮಗಾರಿ ನಡೆಸುತ್ತಲೇ ಬಂದರು. ಈ ಸಂಬಂಧ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ್ದ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಅವರು ಸ್ಥಳಕ್ಕೆ ಭೇಟಿ ನೀಡಿ, ಕೆಳಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಇಷ್ಟಾದರೂ ಕೆಶಿಪ್ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ. ನಮಗೆ ಈಗಿರುವ ರಸ್ತೆ ಮಟ್ಟದಲ್ಲೇ ಸುಗಮ ಸಂಚಾರ ಸಾಧ್ಯವಾಗುವ ರೀತಿಯಲ್ಲಿ ಗದಗ-ಹೊನ್ನಾಳಿ ಹೆದ್ದಾರಿಗೆ ಕೆಳಸೇತುವೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದರು. ಮನವಿ ಸಲ್ಲಿಸಿ ಒಂದು ವರ್ಷ ಗತಿಸಿದರೂ ಕಾಮಗಾರಿ ಮುಂದುವರೆಸಿದರೂ ಸರಿಯಲ್ಲ. ಮೊದಲು ನಮಗೆ ಕೆಳಸೇತುವೆ ನಿರ್ಮಿಸಿ ಆನಂತರ ಕಾಮಗಾರಿ ಮುಂದುವರೆಸಿ ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಕಾಮಗಾರಿಯನ್ನು ತಡೆದು ನಿಲ್ಲಿಸಿದರು.ಬಾರದ ಅಧಿಕಾರಿಗಳು: ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದರೂ ಹೆದ್ದಾರಿ ಅಭಿವೃದ್ಧಿ ಯೋಜನೆಯ ಯಾವ ಅಧಿಕಾರಿಯೂ ಸ್ಥಳಕ್ಕೆ ಬಂದಿರಲಿಲ್ಲ. ರೈತಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ಎಪಿಎಮ್‌ಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ ಹಾಗೂ ಜಿಪಂ ಸದಸ್ಯ ಏಕನಾಥ ಭಾನುವಳ್ಳಿ ಅವರು ಕೆಶಿಪ್ ಅಧಿಕಾರಿಗಳೊಂದಿಗೆ ಫೋನಿನಲ್ಲಿಯೇ ಮಾತನಾಡಿದರು.

ಸ್ಪಂದಿಸಿದ ತಹಸೀಲ್ದಾರ್: ಪ್ರತಿಭಟನೆಯ ಸುದ್ದಿ ತಿಳಿದು ತಹಸೀಲ್ದಾರ ಆರ್.ಎಚ್. ಭಾಗವಾನ್ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಕುರಿತು ಗ್ರಾಮಸ್ಥರ ಅಭಿಪ್ರಾಯಗಳನ್ನು ಆಲಿಸಿದರು. ನಂತರ ಕೆಶಿಪ್ ಅಧಿಕಾರಿಗಳೊಂದಿಗೆ ಫೋನಿನಲ್ಲಿ ಮಾತನಾಡಿದ ಅವರು ಇದೇ ದಿ. 15ರಂದು ಕೆಶಿಪ್, ಜನಪ್ರತಿನಿಧಿಗಳು ಹಾಗೂ ರೈತಸಂಘದ ಪ್ರತಿನಿಧಿಗಳನ್ನು ಸೇರಿಸಿ ಸಭೆಯೊಂದನ್ನು ಆಯೋಜಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದು ಭರವಸೆ ನೀಡಿದರಲ್ಲದೆ , ಆ ವರೆಗೆ ಕಾಮಗಾರಿ ನಡೆಸ ಕೂಡದೆಂದು ಕೆಶಿಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಪೊಲೀಸ್ ಠಾಣೆ ಪಿಐ ಪ್ರವೀಣಕುಮಾರ ಸಿಬ್ಬಂದಿ ಜತೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ ಸವಣೂರ, ಜಿಪಂ ಮಾಜಿ ಅಧ್ಯಕ್ಷ ಏಕನಾಥ್ ಭಾನುವಳ್ಳಿ, ರೈತಸಂಘದ ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ, ರಾಜ್ಯ ಸಂಚಾಲಕ ರವೀಂದ್ರಗೌಡ ಪಾಟೀಲ, ಆಪ್ ಜಿಲ್ಲಾಧ್ಯಕ್ಷ ಹನುಮಂತಪ್ಪ ಕಬ್ಬಾರ, ಗ್ರಾಂ.ಪಂ ಮಾಜಿ ಅಧ್ಯಕ್ಷ ಮಾಲತೇಶ ಮಾಸಣಗಿ, ಗ್ರಾಪಂ ಮಾಜಿ ಉಪಾಧ್ಯಕ್ಷ ಮೈಲಾರೆಪ್ಪ ಮಾಳಗುಡ್ಡಪ್ಪನವರ, ರೈತಸಂಘದ ತಾಲೂಕು ಕಾರ್ಯದರ್ಶಿ ಚಂ.ಸು. ಪಾಟೀಲ, ಮಹಾದೇವಪ್ಪ ಬಣಕಾರ, ಚನ್ನವೀರಗೌಡ ಪಾಟೀಲ, ರುದ್ರಗೌಡ ಪಾಟೀಲ, ಷಣ್ಮುಖಪ್ಪ ಅಣಜಿ, ವಿರುಪಾಕ್ಷಪ್ಪ ಬಣಕಾರ, ಲಕ್ಕಣ್ಣ ಅಣಜಿ, ಚನಬಸಗೌಡ ಪಾಟೀಲ, ಪರಮೇಶ್ವರಪ್ಪ ಬಣಕಾರ ಸೇರಿದಂತೆ ನೂರಾರು ರೈತರು ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Share this article