ಸಂಡೂರು: ತಾಲೂಕಿನಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿಯ ಕುಮಾರಸ್ವಾಮಿ ಗಣಿಯ ಎಲ್ಲ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕಾರ್ಮಿಕರು ಎಐಯುಟಿಯುಸಿಗೆ ಸಂಯೋಜನೆಗೊಂಡ ಸಂಯುಕ್ತ ಗಣಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ದೋಣಿಮಲೈನಲ್ಲಿರುವ ಎನ್‌ಎಂಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಹಿಂದೆ ಸಂಯುಕ್ತ ಗಣಿ ಕಾರ್ಮಿಕ ಸಂಘದಿಂದ ಎನ್‌ಎಂಡಿಸಿ ಹಾಗೂ ವಿಘ್ನೇಶ್ ಕಂಪನಿಗೆ ಮನವಿ ಕಳುಹಿಸಿಕೊಡಲಾಗಿದೆ. ಆದರೂ, ಸಮಸ್ಯೆ ಇತ್ಯರ್ಥಕ್ಕೆ ಇಲ್ಲಿವರೆಗೆ ಯಾವುದೇ ಚರ್ಚೆಗೆ ಆಹ್ವಾನಿಸಿಲ್ಲ. ಈ ಹಿಂದೆ ಕೆಲಸದಲ್ಲಿ ಇರದ ಹೊಸಬರನ್ನು ಕೆಲಸಕ್ಕೆ ತೆಗೆದುಕೊಳ್ಳುವ ಸುದ್ದಿ ಹರಿದಾಡುತ್ತಿರುವುದು ಕಾರ್ಮಿಕರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಹೊಸ ಗುತ್ತಿಗೆದಾರರು ಕೂಡಲೇ ಗಣಿಯಲ್ಲಿ ಈಗಾಗಲೇ ಕೆಲಸ ಮಾಡಿದ ಎಲ್ಲ ಕಾರ್ಮಿಕರನ್ನು ಮೊದಲ ಆದ್ಯತೆ ಮೇರೆಗೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಒಂದು ವೇಳೆ ಇದು ಆಗದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಕಾರ್ಮಿಕರು ಸಜ್ಜಾಗಬೇಕೆಂದು ಕರೆ ನೀಡಿದರು.
ಸಂಯುಕ್ತ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಎನ್. ಪ್ರಮೋದ್ ಮಾತನಾಡಿ, ಕಾರ್ಮಿಕರ ತಮ್ಮ ಶ್ರಮದಿಂದ ಎನ್‌ಎಂಡಿಸಿ ಅಂತಹ ಬೃಹತ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಎನ್‌ಎಂಡಿಸಿ ಕೂಡಾ ನಿರಂತರವಾಗಿ ಇದೇ ಕಾರ್ಮಿಕರನ್ನು ಮುಂದುವರೆಸಿಕೊಂಡು ಬಂದಿದೆ. ಈಗಲೂ ಇದೇ ಪದ್ಧತಿಯನ್ನು ಎನ್‌ಎಂಡಿಸಿ ಮುಂದುವರೆಸಬೇಕು. ಕಾರ್ಮಿಕರು ತಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಬೇಕಾದರೆ, ಒಗ್ಗಟ್ಟು ಕಾಪಾಡಿಕೊಳ್ಳಬೇಕು ಎಂದರು.ಪ್ರತಿಭಟನಾಕಾರರು ತಮ್ಮ ಬೇಡಿಕೆಯ ಮನವಿಯನ್ನು ಎನ್‌ಎಂಡಿಸಿ ಡಿಜಿಎಂ (ಎಚ್.ಆರ್) ವೇಲು ವಸಂತನ್ ಅವರಿಗೆ ಸಲ್ಲಿಸಿದರು. ವೇಲು ವಸಂತನ್ ಮನವಿ ಸ್ವೀಕರಿಸಿ, ಏ.೨೦ರಂದು ಎನ್‌ಎಂಡಿಸಿ ಕಾಂಟ್ರಾಕ್ಟರ್ ಹಾಗೂ ಯೂನಿಯನ್ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಲಾಗುವುದು. ಕೂಡಲೇ ರಾಕ್‌ಟೆಕ್ ಕಂಪನಿ ಅಡಿಯಲ್ಲಿ ಕೆಲಸ ಮಾಡಿದ ಎಲ್ಲ ೫೦೦ ಕಾರ್ಮಿಕರ ಪಟ್ಟಿಯನ್ನು ಅಗತ್ಯ ಮಾಹಿತಿಗಳೊಂದಿಗೆ ನೀಡಲು ಕಾರ್ಮಿಕ ಸಂಘಟನೆಯ ಮುಖಂಡರಿಗೆ ತಿಳಿಸಿದರು.