ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯೆಂದು ಹೆಸರಾಗಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಬಳಿ ಸೇರಿದ ಕಾರ್ಯಕರ್ತರು, ಕೆಲ ರಾಜಕೀಯ ಪ್ರೇರಿತ ಪಟ್ಟಭದ್ರ ಹಿತಾಸಕ್ತಿಗಳು, ಭಷ್ಟ್ರ ಅಧಿಕಾರಿಗಳು ಹಾಗೂ ಮಧ್ಯವರ್ತಿ ದಲ್ಲಾಳಿಗಳ ಪಿತೂರಿಯಿಂದ ಶ್ರೀನಿವಾಸ್ ಅವರನ್ನು ಲಂಚ ಪ್ರಕರಣದಲ್ಲಿ ಸಿಲುಕಿಸಿ ವರ್ಗಾವಣೆ ಹಾಗೂ ಅಮಾನತುಗೊಳಿಸಲು ದೂರು ಸಲ್ಲಿಸಲಾಗಿದೆ. ಆದರೆ, ಮೇಲ್ನೋಟಕ್ಕೆ ಶ್ರೀನಿವಾಸ್ ಅವರು ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ನಾಲ್ಕೈದು ತಿಂಗಳ ಅವಧಿಯಲ್ಲಿ ೩೫೦೦ಕ್ಕೂ ಹೆಚ್ಚು ಪ್ರಕರಣ ಇತ್ಯರ್ಥಪಡಿಸಿದ್ದಾರೆ. ಜನ ಸಾಮಾನ್ಯರ ಜತೆ ಸಂಯಮದಿಂದ ನಡೆದುಕೊಂಡು ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಕಂದಾಯ ಇಲಾಖೆಯಲ್ಲಿ ಸರಾಗವಾಗಿ ಹಾಗೂ ಮಧ್ಯವರ್ತಿಗಳ ಬೆಂಬಲವಿಲ್ಲದೆ ಆಗುತ್ತಿರುವ ಕೆಲಸದ ಬೆಳವಣಿಗೆ ಸಹಿಸದೇ ಎಸಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಅವರ ವಿರುದ್ಧದ ಆರೋಪಗಳೆಲ್ಲ ಸತ್ಯಕ್ಕೆ ದೂರವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಅಕಾರಿಯನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು.ಪ್ರತಿಭಟನೆಯಲ್ಲಿ ಜಿಲ್ಲಾ ಉಸ್ತುವಾರಿ ರಮೇಶ್‌ಗೌಡ, ನಾಗರಾಜು, ಮಲ್ಲೇಶ, ಶಶಿಧರ್ ಇತರರಿದ್ದರು.
ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಒತ್ತಾಯಿಸದ ಜನಪ್ರತಿನಿಧಿಗಳು, ರೈತ ಸಂಘ ಕಿಡಿಕೆ.ಆರ್.ಪೇಟೆ:
ಬೇಸಿಗೆಯಲ್ಲಿ ದನಕರುಗಳಿಗೆ ನೀರಿಲ್ಲದೆ ರೈತ ಸಮುದಾಯ ಬಳಲುತ್ತಿದ್ದರೂ ಹೇಮಾವತಿ ಜಲಾಶಯದಿಂದ ಕಾಲುವೆಗಳ ಮುಖಾಂತರ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸುವಂತೆ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕದ ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ಧ ತಾಲೂಕು ರೈತಸಂಘ ಕಿಡಿಕಾರಿದೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಜಿಲ್ಲೆಯ ಕೆ.ಆರ್.ಪೇಟೆ, ಪಾಂಡವಪುರ, ನಾಗಮಂಗಲ ಮತ್ತು ಮಂಡ್ಯ ತಾಲೂಕಿನ ಕೆಲ ಭಾಗಗಳ ರೈತರು ಹೇಮಾವತಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುತ್ತಾರೆ. ಈ ವ್ಯಾಪ್ತಿ ನೂರಾರು ಕೆರೆ ಕಟ್ಟೆಗಳಿದ್ದು ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದು ನಿಂತಿರುವ ಬೆಳೆಗಳಿವೆ ಎಂದು ತಿಳಿಸಿದ್ದಾರೆ.
ಹೇಮಾವತಿ ಜಲಾಶಯದಿಂದ ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಿ ಬೆಳೆಗಳ ಸಂರಕ್ಷಣೆ, ಜನ ಜಾನುವಾರುಗಳ ಕುಡಿಯುವ ನೀರು ಒದಗಿಸಬೇಕು. ಈ ಬಗ್ಗೆ ರೈತಸಂಘ ನಿರಂತರ ಹೋರಾಟ ನಡೆಸಿ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದರೂ ಜಲಾಶಯದ ಮುಖ್ಯ ಇಂಜಿನಿಯರ್ ಸೇರಿದಂತೆ ಹಲವು ಅಧಿಕಾರಿಗಳ ಮಟ್ಟದ ಸಭೆ ನಡೆದಿದ್ದರೂ ರೈತರ ಪಾಲಿಗೆ ಅಗತ್ಯವಾದ ನೀರು ಹೇಮಾವತಿ ಜಲಾಶದಿಂದ ಇದುವರೆಗೂ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ನೀರು ಬಿಡುಗಡೆಗಾಗಿ ಏ.27 ರಂದು ಅಧಿಕಾರ ಹೊಂದಿರುವ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ರೈತಸಂಘ ಪ್ರತಿಭಟನೆ ನಡೆಸಿದ್ದು, ಈ ಸಂಬಂಧ 2 ರಂದು ಸಭೆ ಮಾಡುವುದಾಗಿ ಪ್ರಾದೇಶಿಕ ಆಯುಕ್ತರು ಭರವಸೆ ನೀಡಿದ್ದಾರೆ. ಇದರ ಬಗ್ಗೆ ನಂಬಿಕೆಯಿಲ್ಲ ಎಂದು ಹೇಳಿದ್ದಾರೆ.
ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ವಿಧಾನ ಸಭೆಯಲ್ಲಿ ನೀರಿಗಾಗಿ ಆಗ್ರಹಿಸಿದ್ದು ಹೊರತುಪಡಿಸಿದರೆ ನಾಗಮಂಗಲ ಶಾಸಕ, ಸಚಿವ ಎನ್.ಚಲುವರಾಯಸ್ವಾಮಿ, ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಮಂಡ್ಯ ಶಾಸಕ ರವಿಕುಮಾರ್ ಅವರು ರೈತರ ಹಿತಸಕ್ತಿಗಾಗಿ ತಮ್ಮ ಬದ್ದತೆ ಪ್ರದರ್ಶಿಸುತ್ತಿಲ್ಲ. ಕೂಡಲೇ ಜಿಲ್ಲೆಯ ಜನಪ್ರತಿನಿಧಿಗಳು ತಕ್ಷಣವೇ ಹೇಮಾವತಿ ನೀರಿನ ಬಗ್ಗೆ ತಮ್ಮ ನಿಲುವನ್ನು ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.